ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ “ಪಥ್ಯಾಹಾರ ದಿನ” ಆಚರಣೆ

ಉಡುಪಿ: ಪ್ರತಿ ವರ್ಷ ಜನವರಿ 10 ಅನ್ನು ಪಥ್ಯಾಹಾರ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. “ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ಪಥ್ಯಾಹಾರ ತಜ್ಞರ ಪಾತ್ರ” ಎಂಬ ಈ ವರ್ಷದ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಎಂ.ಸಿ.ಎಚ್‌.ಪಿ ಕಾಲೇಜಿನ ಪಥ್ಯಾಹಾರ ವಿಭಾಗದ ವಿದ್ಯಾರ್ಥಿಗಳು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಪಥ್ಯಾಹಾರ ತಜ್ಞರ ತಂಡವು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಪಥ್ಯಾಹಾರದ ಬಗ್ಗೆ ವಿಶೇಷ ಜಾಗೃತಿಯನ್ನು ಮೂಡಿಸುವ ಹಲವು ಬಗೆಯ ಆಟಗಳನ್ನು ಆಯೋಜಿಸಿತ್ತು .

ಪೌಷ್ಟಿಕಾಂಶದ ಕುರಿತು ಸರಳವಾದ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದವರಿಗೆ ಬಹುಮಾನವಾಗಿ ಹಣ್ಣುಗಳನ್ನು ನೀಡಲಾಯಿತು. ಹಣ್ಣುಗಳನ್ನು ತಿನ್ನುವ ಅಭ್ಯಾಸವನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು.

ಆಹಾರದ ಪಿರಮಿಡ್ ಗಳನ್ನು ತೋರಿಸಿ ಪ್ರತ್ಯೇಕ ಆಹಾರದ ಚಿತ್ರಗಳನ್ನು ನೀಡಿ ಅದನ್ನು ಸರಿಯಾದ ಆಹಾರ ಪಿರಮಿಡ್ ಗಳನ್ನಾಗಿ ಜೋಡಿಸುವಂತೆ ಹೇಳಲಾಗಿತ್ತು. ಇದರಿಂದ ಅವರಲ್ಲಿ ಯಾವ ಆಹಾರವನ್ನು ಅತಿ ಕಡಿಮೆ ಬಳಸಬೇಕು , ಯಾವುದನ್ನು ಮಿತವಾಗಿ ಬಳಸಬೇಕು, ಯಾವುದನ್ನು ಧಾರಾಳವಾಗಿ ಬಳಸಬೇಕು, ಯಾವುದನ್ನು ನಿಯಮಿತವಾಗಿ ಬಳಸಬೇಕು ಎಂಬ ಅರಿವು ಮೂಡಿತು.

ರಹಸ್ಯವಾದ ಚಟ್ನಿ ಪುಡಿಯನ್ನು ನೀಡಿ ಅದನ್ನು ಯಾವೆಲ್ಲ ಆಹಾರ ಪದಾರ್ಥಗಳಿಂದ ತಯಾರಿಸಲಾಗಿದೆ ಎಂದು ಪಟ್ಟಿ ಮಾಡುವಂತೆ ಹೇಳಲಾಗಿತ್ತು. ನುಗ್ಗೆ ಹೂವು ಮತ್ತು ಇತರ ಸಾಂಬಾರ ಪದಾರ್ಥಗಳಿಂದ ತಯಾರಿಸಿದ ಚಟ್ನಿ ಪುಡಿ ಅದಾಗಿತ್ತು. ನಮ್ಮ ನೆರೆಹೊರೆಯಲ್ಲಿ ಸುಲಭವಾಗಿ ಬೆಳೆಯುವ ಆಹಾರದಿಂದ ಹೇಗೆ ಪೌಷ್ಟಿಕಾಂಶವನ್ನು ಪಡೆಯಬಹುದು ಎಂಬುದನ್ನು ತಿಳಿಯಪಡಿಸಲಾಯಿತು.

ಮನೋರಂಜನೆಗಾಗಿ ಬಲೂನ್ ಆಟವನ್ನು ಆಡಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಬೆಲ್ಲದ ಪಾನಕ ನೀಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಎಮ್.ಸಿ.ಹೆಚ್.ಪಿ. ಕಾಲೇಜಿನ ಪಥ್ಯಾಹಾರ ವಿಭಾಗದ ವಿದ್ಯಾರ್ಥಿಗಳು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಪಥ್ಯಾಹಾರ ತಜ್ಞರು ಉಪಸ್ಥಿತರಿದ್ದರು.