ಆಡುಭಾಷೆಯಲ್ಲಿ ಮಜ್ಜಿಗೆ ಸೊಪ್ಪು ಎಂದು ಚಿರಪರಿಚಿತವಾಗಿರುವ ಹುಲ್ಲಿನ ಜಾತಿಯ ಈ ಸಸ್ಯದ ಎಲೆಗಳು ಮತ್ತು ಎಣ್ಣೆಯನ್ನು ಔಷಧವನ್ನು ತಯಾರಿಸಲು ಬಳಸಲಾಗುತ್ತದೆ. ಸಂಸ್ಕೃತದಲ್ಲಿ ತಕೃ ತೃಣ, ತುಳುವಿನಲ್ಲಿ ಅಲೆಪಂತಿ, ಕನ್ನಡದಲ್ಲಿ ಮಜ್ಜಿಗೆ ಸೊಪ್ಪು ಅಥವಾ ನಿಂಬೆ ಸೊಪ್ಪು ಮತ್ತು ಇಂಗೀಷ್ ನಲ್ಲಿ ಲೆಮನ್ ಗ್ರಾಸ್ ಎಂದು ಕರೆಯುತ್ತಾರೆ.
ನಿಂಬೆಯ ಪರಿಮಳವನ್ನು ಸೂಸುವ ಮಜ್ಜಿಗೆ ಸೊಪ್ಪನ್ನು ಸಾಮಾನ್ಯವಾಗಿ ಮೌಖಿಕವಾಗಿ, ಚರ್ಮಕ್ಕೆ ನೇರವಾಗಿ ಅನ್ವಯಿಸಲಾಗುತ್ತದೆ ಅಥವಾ ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಅರೋಮಾಥೆರಪಿಯಾಗಿ ಬಳಸಲಾಗುತ್ತದೆ. ಅಲ್ಲದೆ, ಡಿಯೋಡರೆಂಟ್ ಗಳು, ಸಾಬೂನುಗಳು ಮತ್ತು ಸೌಂದರ್ಯವರ್ಧಕಗಳಲ್ಲಿ ಸುಗಂಧವಾಗಿ ಕೂಡಾ ಬಳಸಲಾಗುತ್ತದೆ.
ಆಹಾರ ಮತ್ತು ಪಾನೀಯಗಳಲ್ಲಿ, ಮಜ್ಜಿಗೆ ಸೊಪ್ಪನ್ನು ನಿಂಬೆಯ ಸುವಾಸನೆಗಾಗಿ ಬಳಸಲಾಗುತ್ತದೆ. ಹಲವರಿಗೆ ಲೆಮನ್ ಗ್ರಾಸ್ ಟೀ ಎಂದರೆ ಬಹಳ ಅಚ್ಚುಮೆಚ್ಚು.
ಕೆಲವು ಬ್ಯಾಕ್ಟೀರಿಯಾ ಮತ್ತು ಈಸ್ಟ್ ಬೆಳವಣಿಗೆಯನ್ನು ತಡೆಯಲು ಮಜ್ಜಿಗೆ ಸೊಪ್ಪು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಈ ಸೊಪ್ಪಿನ ಸೇವನೆಯು ನೋವು ಮತ್ತು ಊತವನ್ನು ನಿವಾರಿಸುತ್ತದೆ, ಜ್ವರವನ್ನು ಕಡಿಮೆ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ, ಗರ್ಭಾಶಯ ಮತ್ತು ಮುಟ್ಟಿನ ಹರಿವನ್ನು ಉತ್ತೇಜಿಸುತ್ತದೆ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ ಎಂದು ಭಾವಿಸಲಾಗಿದೆ.
ಮನೆಯಂಗಳದಲ್ಲಿ ನೀರಿನ ಸೆಲೆ ಇದ್ದಲ್ಲಿ ಹುಲುಸಾಗಿ ಬೆಳೆಯುವ ಈ ಸಸ್ಯದ ಎಲೆಗಳನ್ನು ಚಹಾ ತಯಾರಿಸುವಾಗ ಹಾಕಿದಲ್ಲಿ ಚಹಾದ ರುಚಿ ಹೆಚ್ಚುವುದಲ್ಲದೆ, ರೋಗನಿರೋಧಕ ಶಕ್ತಿಯೂ ವರ್ಧಿಸುವುದು. ಚಹಾ ಮಾಡಲು ಬಳಸುವ ಮಜ್ಜಿಗೆ ಸೊಪ್ಪನ್ನು ನೇರವಾಗಿಯೂ ಬಳಸಬಹುದು ಅಥವಾ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ಇಟ್ಟುಕೊಂಡು ಬೇಕಾದಾಗ ಬಳಸಬಹುದು.
ಶೀತ, ಕೆಮ್ಮು ನೆಗಡಿ ಮತ್ತು ಜ್ವರದ ಸಂದರ್ಭದಲ್ಲಿ ಒಂದೆರಡು ಎಲೆಗಳನ್ನು ಅಮೃತ ಬಳ್ಳಿ, ಕಾಳುಮೆಣಸು, ಶುಂಠಿ ಜೊತೆ ನೀರಿನಲ್ಲಿ ಕುದಿಸಿ ತಣಿಸಿ ಕುಡಿದಲ್ಲಿ ಜ್ವರದಿಂದ ಮುಕ್ತಿ ಸಿಗುವುದು.
ಮಜ್ಜಿಗೆ ಸೊಪ್ಪಿನ ಎಣ್ಣೆಯನ್ನು ಊತಗಳಲ್ಲಿದ್ದಲ್ಲಿ ಬಳಸಬಹುದು ಮಾತ್ರವಲ್ಲ ಇದನ್ನು ನೈಸರ್ಗಿಕ ಮನೆ ಶುದ್ದಿಕಾರಕವಾಗಿ ಉಪಯೋಗಿಸಬಹುದು. ಬಿಸಿ ನೀರಿಗೆ ಒಂದೆರಡು ಹನಿ ಎಣ್ಣೆಯನ್ನು ಹಾಕಿ ಕೋಣೆಯಲ್ಲಿ ಇಟ್ಟಲ್ಲಿ ಮನೆ ಸುವಾಸನೆ ಭರಿತವಾಗಿ ಖಿನ್ನತೆ ಶಮನವಾಗುವುದು.
ವಿ.ಸೂ: ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ. ಸೇವನೆಯ ಮುನ್ನ ತಜ್ಞರ ಸಲಹೆ ಪಡೆಯುವುದು ಒಳಿತು.