ಗುಲಾಬಿ ಹೂವು ನೀವು ಎಂದೂ ಯೋಚಿಸಿರದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನಿಮಗೆ ನೀಡುತ್ತದೆ ಎನ್ನುವುದು ನಿಮಗೆ ತಿಳಿದಿದೆಯೆ? ಮನೆಯ ಹೂದೋಟಗಳಲ್ಲಿ ತಣ್ಣನೆ ನಸುನಗುತ್ತಾ ನಿಂತಿರುವ ಈ ಹೂವು ನಿಮ್ಮ ದೇಹ, ಮನಸ್ಸು ಮತ್ತು ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಪ್ರಾಚೀನ ಕಾಲದಿಂದಲೂ ಸೌಂದರ್ಯಪ್ರಸಾಧನಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಗುಲಾಬಿಯು ತಾನು ಎಷ್ಟು ಚೆಲುವುಳ್ಳ ಹೂವಾಗಿದೆಯೋ ಅದನ್ನು ತಲೆಯಲ್ಲಿ ಮುಡಿಯುವುದರಿಂದ ಹೆಂಗಳೆಯರ ಚೆಲುವು ಹೇಗೆ ಇಮ್ಮಡಿಸುತ್ತದೋ ಅಂತೆಯೆ ಗುಲಾಬಿಯನ್ನು ನಿಯಮಿತವಾಗಿ ಮತ್ತು ಹಿತಮಿತವಾಗಿ ಬಳಸಿದಲ್ಲಿ ದೇಹ ಮತ್ತು ಮನಸ್ಸಿಗೆ ಚೇತೋಹಾರಿಯಾಗುವ ಜೊತೆಗೆ ಸೌಂದರ್ಯವನ್ನೂ ವರ್ಧಿಸುತ್ತದೆ.
1 ದೇಹದ ತೂಕ ಕಡಿಮೆ ಮಾಡಲು ಸಹಾಯಕ
ಗುಲಾಬಿ ದಳಗಳು ದೇಹದಿಂದ ವಿಷವನ್ನು ಹೊರಹಾಕುವುದರ ಜೊತೆಗೆ ಚಯಾಪಚಯವನ್ನು ಸುಧಾರಿಸುವ ಸಂಯುಕ್ತಗಳನ್ನು ಹೊಂದಿರುತ್ತವೆ. ಇದರಿಂದಾಗಿ ದೇಹದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಒಂದು ಹಿಡಿ ಗುಲಾಬಿ ದಳಗಳನ್ನು ತಿನ್ನುವುದು ನಿಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸುತ್ತದೆ ಮತ್ತು ಹೆಚ್ಚು ತಿನ್ನುವುದನ್ನು ತಡೆಯುತ್ತದೆ. ನೈಸರ್ಗಿಕ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
ವಿಧಾನ: ಒಂದು ಲೋಟ ಕುದಿಯುವ ನೀರಿಗೆ ಸುಮಾರು 10-15 ತಾಜಾ ಗುಲಾಬಿ ದಳಗಳನ್ನು ಸೇರಿಸಿ ಮತ್ತು ನೀರು ಗುಲಾಬಿ ಬಣ್ಣಕ್ಕೆ ತಿರುಗುವವರೆಗೆ ಕಾಯಿರಿ. ಈ ದ್ರಾವಣಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಕೂಡ ಸೇರಿಸಬಹುದು. ದೇಹದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಬೆಳಗ್ಗೆ ಈ ಚಹಾವನ್ನು ನಿಯಮಿತವಾಗಿ ಕುಡಿಯಿರಿ.
2 ನೈಸರ್ಗಿಕ ಕಾಮೋತ್ತೇಜಕ
ಗುಲಾಬಿಗಳು ಪ್ರೀತಿಯ ಸಾರ್ವತ್ರಿಕ ಸಂಕೇತ ಮಾತ್ರವಲ್ಲ, ಅದು ನೈಸರ್ಗಿಕ ಕಾಮೋತ್ತೇಜಕವೂ ಆಗಿದೆ. ಆಯುರ್ವೇದದ ಪ್ರಕಾರ, ಗುಲಾಬಿ ದಳಗಳು ನಮ್ಮ ದೇಹದಲ್ಲಿ ಎರಡು ಅಗತ್ಯ ದೋಷಗಳ ಮೇಲೆ ಕಾರ್ಯನಿರ್ವಹಿಸುವ ಮೂಲಕ ವ್ಯಕ್ತಿಯು ಲೈಂಗಿಕವಾಗಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಗುಲಾಬಿಯು ಹೃದಯ, ಮನಸ್ಸು ಮತ್ತು ನರಮಂಡಲವನ್ನು ನಿಯಂತ್ರಿಸುತ್ತದೆ.
ವಿಧಾನ: ಕೆಲವು ದಳಗಳನ್ನು ಕಿತ್ತು, ಅವುಗಳನ್ನು ಚೆನ್ನಾಗಿ ತೊಳೆದು ಪ್ರತಿದಿನ ತಿನ್ನಿರಿ. ಇದು ನಿಮಗೆ ಚೈತನ್ಯ ಮತ್ತು ಪುನಶ್ಚೇತನವನ್ನು ಅನುಭವಿಸಲು ಸಹಾಯ ಮಾಡುತ್ತದೆ ಮತ್ತು ಲೈಂಗಿಕವಾಗಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.
3 ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ
ಆಯಾಸ ಮತ್ತು ಒತ್ತಡದೊಂದಿಗೆ ನಿದ್ರಾಹೀನತೆಯು ಮಾನಸಿಕ ಕಿರಿಕಿರಿಗೆ ಕಾರಣವಾಗುತ್ತದೆ. ಗುಲಾಬಿ ದಳಗಳು ಮತ್ತು ಅದರ ಪರಿಮಳ ಈ ರೋಗಲಕ್ಷಣಗಳನ್ನು ಗುಣಪಡಿಸುತ್ತದೆ. ಪ್ಯಾರಾ ಬಾ-ಕೈಕ್ಸಾ ವಿಶ್ವವಿದ್ಯಾನಿಲಯದ ಶರೀರಶಾಸ್ತ್ರ ಮತ್ತು ರೋಗಶಾಸ್ತ್ರ ವಿಭಾಗ/ಎಲ್.ಟಿ.ಎಫ್ ನಡೆಸಿದ ಅಧ್ಯಯನದ ಪ್ರಕಾರ, ಗುಲಾಬಿ ಪರಿಮಳವನ್ನು ಉಸಿರಿನೊಳಗೆ ಎಳೆದುಕೊಳ್ಳುವುದರಿಂದ ಇದು ನಿದ್ರಾಜನಕ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ.
ವಿಧಾನ: ನೀವು ಬಿಸಿನೀರಿನಲ್ಲಿ ಸ್ನಾನಮಾಡುವವರಾದಲ್ಲಿ ನೀರಿಗೆ ಗುಲಾಬಿ ದಳಗಳನ್ನು ಹಾಕಿ. ನೀರಿನ ಶಾಖವು ಗುಲಾಬಿ ದಳಗಳ ಪರಿಮಳವನ್ನು ಬಿಡುಗಡೆ ಮಾಡುತ್ತದೆ ಮತ್ತು ನಿಮ್ಮ ಸ್ನಾನಗೃಹವನ್ನು ಹೂವಿನ ಪರಿಮಳದಿಂದ ತುಂಬಿಸುತ್ತದೆ. ಇದರಿಂದ ನಿಮ್ಮ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿಯ ಅನುಭವವಾಗುತ್ತದೆ.
4 ಮೂಲವ್ಯಾಧಿ ರೋಗದಲ್ಲಿ ಪರಿಣಾಮಕಾರಿ
ಗುಲಾಬಿ ದಳಗಳು ಮೂಲವ್ಯಾಧಿ ಚಿಕಿತ್ಸೆಯಲ್ಲಿ ನೈಸರ್ಗಿಕ ಸಹಾಯಕವಾಗಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ, ಅವು ನಾರು ಮತ್ತು ನೀರಿನ ಅಂಶದಲ್ಲಿ ಸಮೃದ್ಧವಾಗಿವೆ ಮತ್ತು ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತವೆ.
ವಿಧಾನ: ಒಂದು ಮುಷ್ಟಿ ಗುಲಾಬಿ ದಳಗಳಿಗೆ, ಸುಮಾರು 50 ಮಿಲಿ ನೀರನ್ನು ಸೇರಿಸಿ ಮತ್ತು ದಪ್ಪ ದ್ರಾವಣವನ್ನು ರೂಪಿಸುವವರೆಗೆ ಅವುಗಳನ್ನು ಅರೆಯಿರಿ. ಈಗ, ಈ ದ್ರಾವಣವನ್ನು ಖಾಲಿ ಹೊಟ್ಟೆಯಲ್ಲಿ (ವಿಶೇಷವಾಗಿ ಬೆಳಿಗ್ಗೆ) 3 ದಿನಗಳವರೆಗೆ ಕುಡಿಯಿರಿ. ರಕ್ತ ಮತ್ತು ನೋವು ಯುಕ್ತ ಮೂಲವ್ಯಾಧಿಯ ರೋಗ ಲಕ್ಷಣಗಳಲ್ಲಿ ಇದು ಸಹಕಾರಿ.
5 ಮುಖದ ಸೌದರ್ಯಕ್ಕಾಗಿ
ರೋಸ್ವಾಟರ್ ಅಥವಾ ಪನ್ನೀರು ಸೂಕ್ಷ್ಮ ಚರ್ಮದ ಮೇಲಿನ ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಎಣ್ಣೆಯುಕ್ತ ಚರ್ಮವನ್ನು ಸಮತೋಲನಗೊಳಿಸುತ್ತದೆ, ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಆಸ್ಟ್ರಿಂಜೆಟ್ ಆಗಿ, ಉತ್ತಮ ಕ್ಲೆನ್ಸರ್ ಮತ್ತು ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ನೀವು ನೈಸರ್ಗಿಕವಾಗಿ ಕಿರಿಯ ಪ್ರಾಯದವರಂತೆ ಕಾಣುವಲ್ಲಿ ಸಹಾಯ ಮಾಡುತ್ತದೆ.
ವಿಧಾನ: ನಿತ್ಯವೂ ಪನ್ನೀರು ಅಥವಾ ರೋಸ್ ವಾಟರ್ ಸಿಂಚನವು ಗುಲಾಬಿ ಕಾಂತಿಯಿಂದ ಹೊಳೆಯುವ ಮುಖವನ್ನು ನೀಡುತ್ತದೆ ಮತ್ತು ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಯಾವುದೇ ಫಲಿತಾಂಶಗಳನ್ನು ಕಾಣಲು ಇದನ್ನು ನಿಯಮಿತವಾಗಿ ಬಳಸಿ.
6 ಮೊಡವೆ ಕಲೆಗೆ ಪರಿಣಾಮಕಾರಿ
ನೀವು ಮೊಡವೆಗಳಿಂದ ಬಳಲುತ್ತಿದ್ದರೆ ಮತ್ತು ಅದನ್ನು ನಿಭಾಯಿಸಲು ಕೆಲವು ನೈಸರ್ಗಿಕ ಸಹಾಯಗಳನ್ನು ಹುಡುಕುತ್ತಿದ್ದರೆ, ರೋಸ್ ವಾಟರ್ ನಿಮಗೆ ಸಹಾಯ ಮಾಡಬಹುದು. ಉತ್ತಮ ಮಾಯಿಶ್ಚರೈಸರ್ ಜೊತೆಗೆ, ಗುಲಾಬಿ ದಳಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಒಳಗೊಂಡಿರುವುದರಿಂದ ಮೊಡವೆಗಳನ್ನು ಒಣಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ಫಿನೈಲ್ ಎಥೆನಾಲ್ ಎಂಬ ಒಂದು ನಂಜುನಿರೋಧಕ ಸಂಯುಕ್ತದ ಉಪಸ್ಥಿತಿಯು ಮೊಡವೆಗಳ ವಿರುದ್ಧ ರೋಸ್ ವಾಟರ್ ಅನ್ನು ಪರಿಣಾಮಕಾರಿಯಾಗುವಂತೆ ಮಾಡುತ್ತದೆ.
ವಿಧಾನ: ಕೆಲವು ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ರೋಸ್ ವಾಟರ್ ಸೇರಿಸಿ ನಯವಾದ ಪೇಸ್ಟ್ ಮಾಡಿ ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ, 20 ನಿಮಿಷ ಬಿಟ್ಟು ತಣ್ಣನೆಯ ರೋಸ್ ವಾಟರ್ ನಿಂದ ತೊಳೆಯಿರಿ.
7 ತುಟಿಗಳ ಆರೋಗ್ಯಕ್ಕಾಗಿ
ಗುಲಾಬಿಗಳು ನಿಮ್ಮ ತುಟಿಗಳ ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತವೆ. ಅವು ನಿಮ್ಮ ತುಟಿಗಳಿಗೆ ಗುಲಾಬಿ ಬಣ್ಣವನ್ನು ನೀಡುವುದು ಮಾತ್ರವಲ್ಲದೆ ಚರ್ಮವನ್ನು ತೇವಗೊಳಿಸಿ ಅವುಗಳನ್ನು ಮೃದುಗೊಳಿಸುತ್ತವೆ. ಗುಲಾಬಿ ದಳದ ಪೇಸ್ಟ್ ಅನ್ನು ನೈಸರ್ಗಿಕ ಲಿಪ್ ಸ್ಟಿಕ್ ಆಗಿಯೂ ಬಳಸಬಹುದು.
ವಿಧಾನ: ಒಂದು ಚಮಚ ಹಾಲಿನ ಕೆನೆ ಮತ್ತು ಕೆಲವು ಹನಿ ಜೇನುತುಪ್ಪವನ್ನು ಪೇಸ್ಟ್ಗೆ ಸೇರಿಸಿ ತಾಜಾ ಗುಲಾಬಿ ದಳಗಳ ಪೇಸ್ಟ್ ಮಾಡಿ ನಿಮ್ಮ ತುಟಿಗಳಿಗೆ ಹಚ್ಚಿ. ಹದಿನೈದರಿಂದ ಇಪ್ಪತ್ತು ನಿಮಿಷಗಳ ಬಳಿಕ ಅದನ್ನು ನೀರಿನಿಂದ ತೊಳೆಯಿರಿ. ಕೆಂಬಣ್ಣದ ತುಟಿಗಳನ್ನು ಪಡೆಯಿರಿ.
ಮಾಹಿತಿ: ದ ಹೈಲ್ತ್ ಸೈಟ್.ಕಾಮ್
ಚಿತ್ರಕೃಪೆ: ಇಂಟರ್ನೆಟ್
ವಿ.ಸೂ: ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ. ಬಳಕೆಯ ಮೊದಲು ದಯವಿಟ್ಟು ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.