ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ: ಸ್ಪಷ್ಟೀಕರಣ ನೀಡಿದ ಚಿತ್ರತಂಡ

ಬೆಂಗಳೂರು: ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಟ್ವೀಟ್ ಮಾಡಿದ್ದಾರೆ.

ಹೆಡ್ ಬುಷ್ ಚಿತ್ರದ ನಟ ಧನಂಜಯ್ ಕೂಡಾ ಟ್ವೀಟ್ ಮಾಡಿದ್ದು, ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವೂ ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಈ ವಿಚಾರದ ಬಗ್ಗೆ ಚಿತ್ರತಂಡ ಕೂಡಾ ಸುದ್ದಿಗೋಷ್ಠಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿ ಡಾಲಿ ಧನಂಜಯ, ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಇದರ ಜಿಲ್ಲಾಧ್ಯಕ್ಷ ಎಸ್.ಗುರುಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ,ಚಕ್ರವರ್ತಿ ಚಂದ್ರಚೂಡ್ ಭಾಗಿಯಾಗಿದ್ದಾರೆ. ಬಸವೇಶ್ವರನಗರ ಕಂಬಿ ಸಂಭಾಗಣದಲ್ಲಿ ಈ ಸುದ್ದಿಗೋಷ್ಠಿ ನಡೆದಿದ್ದು, ಲವು ಕಿಡಿಗೇಡಿ ಕಾಣದ ಕೈಗಳು ನನ್ನ ವಿರುದ್ದ ಕೆಲಸ ಮಾಡುತ್ತಿವೆ. ನಾನು ಸಿನಿಮಾ ಮಾಡೋಕೆ ಬಂದಿದ್ದೇನೆ. ರಾಜಕೀಯ ಮಾಡೋಕೆ ಅಲ್ಲ. ಸಿನಿಮಾವನ್ನು ಸಿನಿಮಾ ರೀತಿ ನೋಡಿ ರಾಜಕೀಯ ಮಾಡಬೇಡಿ ಎಂದು ಧನಂಜಯ್ ಹೇಳಿದ್ದಾರೆ.

ಕರಗ, ವೀರಗಾಸೆಗೆ ನಾವು ಅಪಮಾನ ಮಾಡಿಲ್ಲ. ಸಿನಿಮಾ ಬಗ್ಗೆ ಎರಡೂ ಸಮುದಾಯದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಒಂದು ಸಂಭಾಷಣೆಯ ಬಗ್ಗೆ ಕರಗ ಸಮಿತಿಯವರು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಜೊತೆ ಮಾತನಾಡಿದ್ದೇವೆ. ಎದೆ ಮೇಲೆ ಲಿಂಗ ಇಲ್ಲದ, ಶೂ ಧರಿಸಿದವರ ಮೇಲೆ ದಾಳಿ ಮಾಡುವ ದೃಶ್ಯ ಇದೆ. ನಕಲಿಯಾಗಿ ಬಂದವರ ಮೇಲೆ ದಾಳಿ ಮಾಡುವ ದೃಶ್ಯವಿದೆ. ಯಾರಿಗಾದರೂ ಬೇಸರವಾಗಿದ್ದರೆ ಅವರ ಬಳಿ ಕ್ಷಮೆ ಕೇಳುತ್ತೇನೆ. ವೀರಗಾಸೆ ಸಂಸ್ಕೃತಿಯಲ್ಲಿ ಬೆಳೆದ ನನಗೆ ಆ ಸಂಸ್ಕೃತಿಯ ಬಗ್ಗೆ ಗೊತ್ತಿದೆ, ದೇವರಿಗೆ ಅಪಚಾರವಾಗುವ ರೀತಿಯಲ್ಲಿ ಚಿತ್ರಿಸಲಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.