ಮಹಿಳೆಯರಿಗೆ ತಮ್ಮ ಕುಟುಂಬದ ಆರೈಕೆಯ ಜೊತೆ ಜೊತೆಗೆ ತಮ್ಮ ಆರೋಗ್ಯದತ್ತಲೂ ಗಮನ ಕೊಡಬೇಕಾದುದು ತೀರಾ ಅಗತ್ಯ. ಅದರಲ್ಲೂ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವೇ ಮಹಿಳೆಗೆ ಭಾಗ್ಯ. ಮಹಿಳೆಯರು ಮಾಡಬೇಕಾದ ಆರೋಗ್ಯ ಕಾಳಜಿ ಕುರಿತು ಕಾರ್ಕಳದ ಡಾ.ಹರ್ಷಾ ಕಾಮತ್ ನೀಡಿರುವ ಮಾಹಿತಿ ಇಲ್ಲಿದೆ ನೋಡಿ.
ಮಹಿಳೆಯರಿಗೆ ಪಥ್ಯ ಹೀಗಿದೆ ನೋಡಿ:
40 ಪ್ರಾಯದೊಳಗಿನ ಮಹಿಳೆಯರಿಗೆ ಅಷ್ಟೊಂದು ದೈಹಿಕ ಸಮಸ್ಯೆ ಕಾಡುವುದು ಕಮ್ಮಿ. ಆದರೆ 40 ದಾಟಿದ ಮೇಲೆ ಹಾರ್ಮೋನ್ ಏರುಪೇರಾಗಲು ಆರಂಭವಾಗುತ್ತದೆ . ಆದ್ದರಿಂದ ಅವಳ ಜೀವನ ಶೈಲಿ ಹಾಗೂ ಆಹಾರದ ಬಗ್ಗೆ ಗಮನ ನೀಡುವುದು ಬಹಳ ಅಗತ್ಯ .ಆಹಾರದಲ್ಲಿ ಕೊಬ್ಬು ಹಾಗೂ ಕಾರ್ಬೋಹೈಡ್ರೇಡ್ ಸೇವನೆ ಕಮ್ಮಿ ಮಾಡಬೇಕು. ನಾರಿನ ಅಂಶವಿರುವ ಆಹಾರ ವಿಟಮಿನ್ಸ್, ಕ್ಯಾಲ್ಷಿಯಂ ,ಮಿನರಲ್ಸ್, ಪ್ರೊಟೀನ್ ವಿರುವ ಆಹಾರ ಸೇವನೆ ಅತ್ಯಗತ್ಯ. ಕೊಬ್ಬು ಅಧಿಕವಾದರೆ ಪಿಸಿಒಡಿ (ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್) ಬರುವ ಸಾಧ್ಯತೆ ಜಾಸ್ತಿ. ಕ್ಯಾಲ್ಷಿಯಂ ಹಾಗೂ ಮೆಗ್ನೀಶಿಯಂ ಸೇವನೆ ಆಸ್ಟಿಯೋಪೋರೋಸಿಸ್ (ಅಸ್ಥಿರಂದ್ರತೆ)ಹಾಗೂ ಅರ್ಥ್ ರೈಟಿಸ ತಡೆಗಟ್ಟಲು ಅಗತ್ಯ. ಇದು ಮೆನೋಪಾಸ್ ಮಹಿಳೆಯರಲ್ಲಿ ಕಾಣುವುದು ಸಾಮಾನ್ಯ. ಇದನ್ನು ತಡೆಯಲು ಕ್ಯಾಲ್ಸಿಯಂ ಯುಕ್ತ ಆಹಾರ ಹಾಲು, ಮೊಸರು, ಚೀಸ್ ,ಬಟಾಣಿ ,ಬೀನ್ಸ್ ಸೇವಿಸಬೇಕು.
ಕಬ್ಬಿಣಾಂಶದ ಕೊರತೆ ಕೂಡ ಕಾಣಬಹುದು ಇದರಿಂದ ಸುಸ್ತು ,ತಲೆಸುತ್ತು ಬರುವುದು ,ತಲೆನೋವು ,ಅನಿಮಿಯ ಕಾಣಿಸಿಕೊಳ್ಳುತ್ತದೆ . ಆದ್ದರಿಂದ ಕಬ್ಬಿಣಾಂಶವಿರುವ ಆಹಾರ,ಪಾಲಕ್, ಬಟಾಣಿ, ಹಸಿರು ತರಕಾರಿ ಸೇವಿಸುವುದು ಅಗತ್ಯ.
ಚಿಂತೆ ಬಿಡಿ, ಧ್ಯಾನ ಮಾಡಿ:
*ದಿನ ನಿತ್ಯ ವ್ಯಾಯಾಮ ಮಾಡುವುದು ಸೂಕ್ತ . 45 ನಿಮಿಷ ವಾಕಿಂಗ್ ವಾರಕ್ಕೆ ಐದು ದಿನವಾದರೂ ಮಾಡಬೇಕು. ಇದರಿಂದ ದೇಹಕ್ಕೆ ಹಾಗೂ ಮನಸ್ಸಿಗೆ ಹಿತವೆನಿಸುತ್ತದೆ. ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಮಹಿಳೆಯರಿಗೆ ಉತ್ತಮವಾದ ಪರಿಣಾಮ ಬೀರುವುದರಿಂದ ಈ ಮೂರನ್ನೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ.
* ಯೋಗಾಸನಗಳಲ್ಲಿ ವೃಕ್ಷ ಸನ, ವೀರಾಸನ, ಧನುರಾಸನ, ಅರ್ಧ ಮತ್ಸ್ಯೇಂದ್ರಿಯಾಸನ, ವಜ್ರಾಸನ, ಸರ್ವಾಂಗಾಸನ ,ಉಷ್ಟ್ರಾಸನ ,ಪಶ್ಚಿಮೋತ್ತಾಸನ ಮೊದಲಾದ ಆಸನಗಳು ಪರಿಣಾಮಕಾರಿ. ಇದನ್ನು ಯೋಗ ಗುರುವಿನಿಂದಲೇ ಕಲಿತರೆ ಒಳ್ಳೆಯದು.
ಈ ಗಿಡ ಮೂಲಿಕೆಗಳು ಪರಿಣಾಮಕಾರಿ:
1.ಅಶೋಕ – ಇದು ಮಹಿಳೆಯರ ಮುಟ್ಟಿನ ಸಮಸ್ಯೆ,ಕ್ಯಾನ್ಸರ್,ಗರ್ಭಕೋಶದ ಕಾಯಿಲೆ , ಆಂಡ್ರೊಮೆಟ್ರಿಯಲ ದೋಷ ಹಾಗೂ ಹಾರ್ಮೋನ ಇಂಬ್ಯಾಲೆನ್ಸ್ ಗೆ ಉತ್ತಮವಾದುದು .
2.ಶತಾವರಿ- ಇದು ಹಾಲುಣಿಸುವ ತಾಯಂದಿರಿಗೆ , ಮುಟ್ಟಿನ ಸಮಸ್ಯೆ , PMS(ಫ್ರೀ ಮ್ಯಾನ್ ಸಿಂಡ್ರೋಮ್ )ಇನ್ಫರ್ಟಿಲಿಟಿ, ಮೆನೋಪಾಸ್ ಸಿಮ್ಟಮ ಗಳಿಗೆ ಒಳ್ಳೆಯದು .
3.ಆಮಲಕಿ -ಇದು ಗ್ಯಾಸ್ಟ್ರೈಟಿಸ್, ಹೈಪರ್ ಅಸಿಡಿಟಿ ,ಚರ್ಮದ ತೊಂದರೆಗಳು, ಅನಿಮಿಯಾ, ಆಸ್ಟಿಯೋಪೊರೋಸಿಸ್ ,ಅಲೊಪೆಶೆಯಾ, ವರ್ಟಿಗೋ, ಮಾನಸಿಕ ತೊಂದರೆಗಳಿಗೆ ಬಳಸಬಹುದು .
ಇಷ್ಟ್ ಮಾಡಲು ಮರಿಬೇಡಿ:
*ಸಂತಸ ಉಲ್ಲಾಸದಿಂದಿರಿ
*ಎಲ್ಲರನ್ನು ಪ್ರೀತಿಯಿಂದ ಕಾಣಿರಿ
*ದಿನದಲ್ಲಿ ಸ್ವಲ್ಪ ಸಮಯ ತಮ್ಮ ಹವ್ಯಾಸಕ್ಕಾಗಿ ಮೀಸಲಿಡಿ
*ಮಕ್ಕಳ ಜೊತೆ ಅಥವಾ ಸಾಕು ಪ್ರಾಣಿಗಳೊಡನೆ ಆಟವಾಡಿ
*ಋಣಾತ್ಮಕ ಚಿಂತನೆಯಿಂದ ದೂರವಿರಿ
* ಸ್ವಲ್ಪ ಸಮಯವಾದರೂ ಒಳ್ಳೆಯ ಪುಸ್ತಕ ಓದುವುದಕ್ಕೆ ಹಾಗೂ ಬರೆಯುವುದಕ್ಕೆ ಮೀಸಲಿಡಿ .ಇದರಿಂದ ನಿಮ್ಮ ಮನಸ್ಸು ಪ್ರಸನ್ನವಾಗಿರುತ್ತದೆ.