ಕುಂದಾಪುರ: ಎಳೆಯ ಮಕ್ಕಳನ್ನು ಹೇಗೆ ಬೇಕಾದರೂ ಪಳಗಿಸಬಹುದು. ಅವರು ಸಾಕ್ಷಾತ್ ದೇವರಿದ್ದಂತೆ. ಶಾಲಾ ಮಕ್ಕಳು ದೇವರಿಗೆ ಸಮಾನ. ವಾರ್ಷಿಕೋತ್ಸವ ಹಾಗೂ ರಥೋತ್ಸವ ಸಮಾನವಾಗಿ ಕಾಣುತ್ತೇವೆ. ರಥೋತ್ಸವದಲ್ಲಿ ಒಂದೇ ದೇವರಿರುತ್ತಾರೆ. ಆದರೆ ವಾರ್ಷಿಕೋತ್ಸವದಲ್ಲಿ ಹಲವು ದೇವರನ್ನು ಕಾಣಬಹುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಕಟ್ಟಿನಮಕ್ಕಿಯ ಹರ್ಕೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಒಳ್ಳೆಯ ದಾರಿಯತ್ತ ಕೊಂಡೊಯ್ಯುವ ಕೆಲಸ ಶಿಕ್ಷಕರದ್ದು. ಶಿಕ್ಷಕರ ಕೆಲಸ ಶ್ರೇಷ್ಠ ಕೆಲಸ. ಇಡೀ ಬೈಂದೂರು ವಿಧಾನ ಸಭಾ ವ್ಯಾಪ್ತಿಯಲ್ಲಿನ ಶಿಕ್ಷಕರು ಪ್ರಾಮಾಣಿಕವಾದ ಸೇವೆ ಸಲ್ಲಿಸುತ್ತಿದ್ದಾರೆ. ಹೆತ್ತವರು ಬಿಟ್ಟರೆ ಮಕ್ಕಳಿಗೆ ಅತೀವ ಪ್ರೀತಿ, ಕಾಳಜಿ ತೋರಿಸುವವರು ಶಿಕ್ಷಕರು. ಈ ಸಮಾಜವನ್ನು ರೂಪಿಸುವ ಶಿಲ್ಪಿ ಶಿಕ್ಷಕ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯೆ ಇಂದಿರಾ ಶೆಟ್ಟಿ, ಗ್ರಾಮಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಚಂದ್ರ ದೇವಾಡಿಗ, ಹಕ್ಲಾಡಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಡಾ. ಕಿಶೋರ್ ಕುಮಾರ್ ಶೆಟ್ಟಿ, ಶಶಿಧರ ಶೆಟ್ಟಿ, ಚಿತ್ತರಂಜನ್ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಶಾಂತಾರಾಮ್ ಶೆಟ್ಟಿ, ಚಂದ್ರಯ್ಯ ಆಚಾರ್, ಉದಯ ಕುಮಾರ್ ಶೆಟ್ಟಿ, ನಾಗರಾಜ್ ಶೆಟ್ಟಿ, ಎಸ್ಡಿಎಮ್ಸಿ ಅಧ್ಯಕ್ಷ ಪ್ರಮೋದ ಕುಶಲ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ದೇವಾಡಿಗ, ವಿದ್ಯಾರ್ಥಿ ನಾಯಕ ಗಣೇಶ್ ಉಪಸ್ಥಿತರಿದ್ದರು.
ಕೆಎಸ್ಆರ್ಟಿಸಿ ಕುಂದಾಪುರ ಘಟಕದ ರಾಘವೇಂದ್ರ ಆಚಾರ್ ಸ್ವಸ್ತಿ ವಾಚನಗೈದರು. ಶಾಲಾ ಮುಖ್ಯಶಿಕ್ಷಕಿ ಗಿರಿಜಾ ಶಾಲಾ ವರದಿ ವಾಚಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಹಶಿಕ್ಷಕಿ ಗುಣವತಿ ಸ್ವಾಗತಿಸಿದರು. ಉದಯ ಕುಮಾರ್ ಶೆಟ್ಟಿ ನಿರೂಪಿಸಿದರು.