ಚೆನ್ನೈ: ಭಾರತದ ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ ಒಂಬತ್ತು ತಿಂಗಳ ಗರ್ಭಿಣಿ. ಆದರೆ ಸಾಧನೆ ಮಾಡಲೇ ಬೇಕೆನ್ನುವ ಛಲವಿದ್ದವರಿಗೆ ಯಾವುದೂ ಅಡ್ಡಿಯಾಗುವುದಿಲ್ಲ. ಮಂಗಳವಾರ ಮುಕ್ತಾಯಗೊಂಡ 44 ನೇ ಚೆಸ್ ಒಲಿಂಪಿಯಾಡ್ನಲ್ಲಿ ತಮ್ಮ ಕನಸನ್ನು ಸಾಧಿಸಿ ಬೀಗಿದ್ದಾರೆ ಗ್ರ್ಯಾಂಡ್ ಮಾಸ್ಟರ್ ಹರಿಕಾ.
31 ವರ್ಷ ವಯಸ್ಸಿನ ಹರಿಕಾ, ಆಗಸ್ಟ್ 10ರಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಒಂಬತ್ತು ತಿಂಗಳ ಗರ್ಭಾವಸ್ಥೆಯಲ್ಲಿ ಈ ಸಾಧನೆ ಮಾಡಿದ ಕಾರಣ ಅದು ಹೆಚ್ಚು ಭಾವನಾತ್ಮಕವಾಗಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಹರಿಕಾ ದ್ರೋಣವಲ್ಲಿ, ವೈಶಾಲಿ, ಕೊನೇರು ಹಂಪಿ, ತಾನಿಯಾ ಸಚ್ದೇವ್ ಮತ್ತು ಭಕ್ತಿ ಕುಲಕರ್ಣಿ ಅವರನ್ನೊಳಗೊಂಡ ಭಾರತ ‘ಎ’ ತಂಡ ಕಂಚಿನ ಪದಕ ಗೆದ್ದುಕೊಂಡಿತು. ಮತ್ತೊಂದೆಡೆ ಭಾರತ ‘ಬಿ’ ತಂಡವೂ ಮುಕ್ತ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದೆ. 16 ವರ್ಷ ವಯಸ್ಸಿನ ಡಿ ಗುಕೇಶ್, ಆರ್ ಪ್ರಗ್ನಾನಂದ ಮತ್ತು ರೌನಕ್ ಸಾಧ್ವನಿ ಮತ್ತು 18 ವರ್ಷದ ನಿಹಾಲ್ ಸರಿನ್ ಅವರನ್ನು ಒಳಗೊಂಡ ಯುವ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡಿತು, ಮಾತ್ರವಲ್ಲದೆ ನಾಲ್ಕನೇ ಸ್ಥಾನ ಗಳಿಸಿದ ಹಿರಿಯ ಭಾರತ ‘ಎ’ ತಂಡವನ್ನು ಸೋಲಿಸಿತು.
ಚೆಸ್ ಒಲಿಂಪಿಯಾಡ್ ಅನ್ನು ಅಚ್ಚುಕಟ್ಟಾಗಿ ಅಯೋಜಿಸಿದ್ದ ಭಾರತದ ಬಗ್ಗೆ ಜಗತ್ತಿನಾದ್ಯಂತದಿಂದ ಭಾಗವಹಿಸಲು ಬಂದಿದ್ದ ಚೆಸ್ ಆಟಗಾರರಿಂದ ಮೆಚ್ಚುಗೆಯ ಮಹಾಪೂರ ಹರಿದಿದೆ. ಕಾಮನ್ ವೆಲ್ತ್ ಸಾಧನೆಯ ಬೆನ್ನಿಗೆ ಭಾರತವು ಚೆಸ್ ನಲ್ಲೂ ಸಾಧನೆ ಮಾಡಿ ಜಗತ್ತು ತಲೆಬಾಗುವಂತೆ ಮಾಡಿದೆ.