ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ‘ಹನುಮಾನ್’: ಪ್ರತಿ ಟಿಕೆಟ್‌ನಿಂದ 5 ರೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿಕೆ

ಹೈದರಾಬಾದ್: ತೆಲುಗು ನಟ ತೇಜ ಸಜ್ಜ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಅವರ ‘ಹನುಮಾನ್’ ಜನವರಿ 12 ರಂದು ಸಂಕ್ರಾಂತಿ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಹೈದರಾಬಾದ್ ನಲ್ಲಿ ನಡೆದ ಚಿತ್ರದ ಬಿಡುಗಡೆ ಪೂರ್ವ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಭಾಗವಹಿಸಿ ‘ಹನುಮಾನ್’ ನಿರ್ಮಾಪಕರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ಟಿಕೆಟ್‌ನಿಂದ ರೂ 5 ದೇಣಿಗೆ ನೀಡಲು ವಾಗ್ದಾನ ಮಾಡಿದ್ದಾರೆ ಮತ್ತು ತಂಡದ ವತಿಯಿಂದ ಈ ಸುದ್ದಿಯನ್ನು ತಿಳಿಸುವಂತೆ ಆಗ್ರಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಇಂದು ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆದಿದ್ದು ಚಿತ್ರಕ್ಕೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

“ನಿರ್ದೇಶಕ ಪ್ರಶಾಂತ್ ವರ್ಮ ಒಂದು ಮನೋರಂಜನಾ ಚಿತ್ರವನ್ನು ನಿರ್ಮಿಸಿದ್ದಾರೆ, ಹನುಮಾನ್ ಮಹತ್ವಾಕಾಂಕ್ಷೆ, ಉತ್ತೇಜಕ ನಾಟಕ, ಭಾವನೆಗಳು, ವಿ.ಎಫ್.ಎಕ್ಸ್ ಮತ್ತು ಪುರಾಣಗಳ ಕೌಶಲ್ಯಪೂರ್ಣ ಮಿಶ್ರಣ. ಮೈ ನವಿರೇಳಿಸುವ ಕ್ಷಣಗಳಿರುವ ಅಸಾಧಾರಣ ಚಿತ್ರ ಎಂದು ಚಿತ್ರ ವಿಮರ್ಶಕ ತರಣ್ ಆದರ್ಶ್ ಚಿತ್ರವನ್ನು ಶಿಫಾರಸು ಮಾಡಿದ್ದಾರೆ.

ಚಿತ್ರದ ಪಾತ್ರವರ್ಗದ ನಟನೆಯನ್ನೂ ಅವರು ಕೊಂಡಾಡಿದ್ದಾರೆ. ವಿಎಫ್‌ಎಕ್ಸ್ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ, ಆಗುತ್ತಿರುವುದನ್ನು ಅದ್ಭುತವಾಗಿ ತೋರಿಸುತ್ತದೆ, ಆದರೆ ಒಮ್ಮೆಯೂ ಅದು ಕಥೆಯನ್ನು ಮೀರುವುದಿಲ್ಲ. ಎಲ್ಲಾ ಪ್ರಮುಖ ಪಾತ್ರಗಳ ಡಬ್ಬಿಂಗ್ ಸೂಕ್ತವಾಗಿದೆ. ಒಂದೇ ಒಂದು ಕೊರತೆ ಎಂದರೆ ಚಿತ್ರವು ಮೊದಲಾರ್ಧದಲ್ಲಿ ಎಳೆಯುತ್ತದೆ ಹಾಗಾಗಿ ಸಮಯವನ್ನು ಕಡಿತಗೊಳಿಸಬಹುದಾಗಿತ್ತು ಎಂದಿದ್ದಾರೆ.

‘ಹನುಮಾನ್’ ಪ್ರಶಾಂತ್ ವರ್ಮಾ ಬರೆದು ನಿರ್ದೇಶಿಸಿದ ಸೂಪರ್ ಹೀರೋ ಚಿತ್ರ. ನಾಯಕನಾಗಿ ತೇಜ ಸಜ್ಜ ನಟಿಸಿದರೆ, ವಿನಯ್ ರೈ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.