ಕಾರ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ, ಭಾರತ ಸರಕಾರ- ಗಾಂಧಿ ಶಿಲ್ಪ್ ಬಝಾರ್, ಕರ್ನಾಟಕ ಸರಕಾರದ ಕರಕುಶಲ ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ ಇವರ ಸಹಯೋಗದೊಂದಿಗೆ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆಯ ಪ್ರಯುಕ್ತ ಜನವರಿ 25 ರಿಂದ ಫೆಬ್ರವರಿ 3 ರ ವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಕರಕುಶಲ ವಸ್ತುಗಳ ಮತ್ತು ಸಂಜೀವಿನಿ ಸ್ವ- ಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಕಾರ್ಯಕ್ರಮವು ಜನವರಿ 25 ರಂದು ಸಂಜೆ 5.30 ಕ್ಕೆ ಕಾರ್ಕಳ ತಾಲೂಕಿನ ಬೈಲೂರು ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವು ಪ್ರತೀ ದಿನ ಬೆಳಗ್ಗೆ 10 ರಿಂದ ರಾತ್ರಿ 8.30 ರವರೆಗೆ ನಡೆಯಲಿದೆ.
ವಸ್ತು ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟದ ಗಾಂಧಿ ಶಿಲ್ಫ್ ಬಝಾರ್- ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ರಾಜ್ಯಗಳ ಆಕರ್ಷಕ ಕರಕುಶಲ ವಸ್ತುಗಳು ಕಣ್ಮನ ಸೆಳೆಯಲಿದ್ದು, ಪ್ರಮುಖವಾಗಿ ಆಂಧ್ರ ಪ್ರದೇಶದ ಟೆರಕೋಟ ವರ್ಕ್, ಗುಜರಾತ್‌ನ ಆರ್ಟ್ ಮೆಟಲ್ ವೇರ್, ಜಮ್ಮು ಕಾಶ್ಮೀರದ ಎಂಬ್ರಾಯಿಡರಿ ವರ್ಕ್ಸ್, ಕೇರಳದ ಟೆಕ್ಸ್ಟೈಲ್ಸ್, ಹ್ಯಾಂಡ್ ಎಂಬ್ರಾಯಿಡರಿ ಹಾಗೂ ತೆಂಗಿನ ಚಿಪ್ಪಿನ ಉತ್ಪನ್ನ, ಮಧ್ಯ ಪ್ರದೇಶದ ಸೆಣಬು ಹಾಗೂ ಚರ್ಮದ ಉತ್ಪನ್ನ, ಮಹಾರಾಷ್ಟ್ರದ ಫ್ಯಾನ್ಸಿ ಉತ್ಪನ್ನ, ರಾಜಸ್ಥಾನದ ಎಂಬ್ರಾಯಿಡರಿ ವರ್ಕ್ಸ್, ಪೈಂಟಿಂಗ್ ಹಾಗೂ ಬಳೆಗಳು, ಕನ್ಯಾಕುಮಾರಿಯಿಂದ ನ್ಯಾಚುರಲ್ ಪೈಬರ್, ಕರ್ನಾಟಕದ ಚೆನ್ನಪಟ್ಟಣ ಗೊಂಬೆಗಳು ಹಾಗೂ ದೇಶದ ವಿವಿಧ ರಾಜ್ಯಗಳಿಂದ ಪ್ರಸಿದ್ಧ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವು ಇದರ ವಿಶೇಷವಾಗಿದೆ.
ಗಾಂಧಿ ಶಿಲ್ಫ್ ಬಝಾರ್ – 100 ಕುಶಲಕರ್ಮಿಗಳ ಮಾರಾಟ ಮಳಿಗೆ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಸಂಜೀವಿನಿ ಸ್ವ- ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ 130 ಮಹಿಳಾ ಉದ್ಯಮಿಗಳ ಮಾರಾಟ ಮಳಿಗೆಗಳು ಈ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಕುಶಲಕರ್ಮಿಗಳು ತಯಾರಿಸಿರುವ ಕರಕುಶಲ ವಸ್ತುಗಳನ್ನು ಹಾಗೂ ಸಂಜೀವಿನಿ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.