ಹ್ಯಾರಿ ಪಾಟರ್ ಹ್ಯಾಗ್ರಿಡ್ ಪಾತ್ರಧಾರಿ ರಾಬಿ ಕೋಲ್ಟ್ರೇನ್ ಇನ್ನಿಲ್ಲ

ಹ್ಯಾರಿ ಪಾಟರ್ ಚಲನಚಿತ್ರ ಸರಣಿಯಲ್ಲಿ ಹ್ಯಾಗ್ರಿಡ್ ಪಾತ್ರಕ್ಕೆ ಹೆಸರುವಾಸಿಯಾದ ರಾಬಿ ಕೋಲ್ಟ್ರೇನ್ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಐಟಿವಿ ಪತ್ತೇದಾರಿ ನಾಟಕ ಕ್ರ್ಯಾಕರ್ ಮತ್ತು ಜೇಮ್ಸ್ ಬಾಂಡ್ ಚಲನಚಿತ್ರಗಳಾದ ಗೋಲ್ಡನ್ ಐ ಮತ್ತು ದಿ ವರ್ಲ್ಡ್ ಈಸ್ ನಾಟ್ ಎನಫ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ರಾಬಿ ಅವರ ಏಜೆಂಟ್ ಬೆಲಿಂಡಾ ರೈಟ್ ಸ್ಕಾಟ್ಲೆಂಡ್‌ನ ಫಾಲ್ಕಿರ್ಕ್ ಬಳಿಯ ಆಸ್ಪತ್ರೆಯಲ್ಲಿ ನಟ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ರಾಬಿ ಒಂದು “ಅನನ್ಯ ಪ್ರತಿಭೆ” ಎಂದು ವಿವರಿಸಿದ ಅವರು, ಹ್ಯಾಗ್ರಿಡ್ ಪಾತ್ರದ ಮೂಲಕ ಜಗತ್ತಿನಾದ್ಯಂತ ಮಕ್ಕಳು ಮತ್ತು ವಯಸ್ಕರಿಗೆ ಸಂತೋಷ ನೀಡಿದ್ದರು ಎಂದು ಹೇಳಿದರು.

ಅವರು ತಮ್ಮ ಸಹೋದರಿ ಅನ್ನಿ ರೇ, ಅವರ ಮಕ್ಕಳಾದ ಸ್ಪೆನ್ಸರ್ ಮತ್ತು ಆಲಿಸ್ ಮತ್ತು ಅವರ ತಾಯಿ ರೋನಾ ಗೆಮ್ಮೆಲ್ ಅವರನ್ನು ಅಗಲಿದ್ದಾರೆ.

Image

ಐಟಿವಿ ಪತ್ತೇದಾರಿ ನಾಟಕ ಕ್ರ್ಯಾಕರ್ ನ ಕ್ರಿಮಿನಲ್ ಮನಶ್ಶಾಸ್ತ್ರಜ್ಞ ಡಾ ಎಡ್ಡಿ “ಫಿಟ್ಜ್” ಫಿಟ್ಜ್‌ಗೆರಾಲ್ಡ್ ಪಾತ್ರದಲ್ಲಿ ಕಾಲ್ಟ್ರೇನ್ ಖ್ಯಾತಿಯನ್ನು ಗಳಿಸಿದ್ದರು. ಈ ಪಾತ್ರವು ಅವರಿಗೆ 1994 ರಿಂದ 1996 ರವರೆಗೆ ಸತತ ಮೂರು ವರ್ಷಗಳ ಕಾಲ ಅತ್ಯುತ್ತಮ ನಟನಿಗಾಗಿ ಬಾಫ್ತಾ ಪ್ರಶಸ್ತಿಯನ್ನು ತಂದಿತ್ತು. ಹ್ಯಾರಿ ಪಾಟರ್ ಚಲನಚಿತ್ರ ಸರಣಿಯಲ್ಲಿ ಡೇನಿಯಲ್ ರಾಡ್‌ಕ್ಲಿಫ್, ರೂಪರ್ಟ್ ಗ್ರಿಂಟ್ ಮತ್ತು ಎಮ್ಮಾ ವ್ಯಾಟ್ಸನ್ ಜೊತೆಗೆ ರೂಬಿಯಸ್ ಹ್ಯಾಗ್ರಿಡ್ ಆಗಿ ಅವರು ಎಲ್ಲಾ ಎಂಟು ಚಲನಚಿತ್ರಗಳಲ್ಲಿ ನಟಿಸಿದ ಬಳಿಕ ಅವರು ಪ್ರಪಂಚದಾದ್ಯಂತ ಮನೆಮಾತಾಗಿದ್ದರು.

ತಮ್ಮ ಪ್ರೀತಿಯ ಹ್ಯಾಗ್ರಿಡ್ ಅಗಲುವಿಕೆಗೆ ಹ್ಯಾರಿ ಪಾಟರ್ ತಂಡದವರೆಲ್ಲರೂ ಕಂಬನಿ ಮಿಡಿದಿದ್ದಾರೆ.