ಹಫ್ತಾ ನೀಡುವಂತೆ ಉದ್ಯಮಿಗೆ ಬೆದರಿಕೆ: ಭೂಗತ ಪಾತಕಿ ಬನ್ನಂಜೆ ರಾಜನ ಸಹಚರರ ಬಂಧನ

ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜ ಹೆಸರಲ್ಲಿ ಉಡುಪಿಯ ಉದ್ಯಮಿಯೊಬ್ಬರಿಗೆ ಹಫ್ತಾಕ್ಕಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಐಬಿ ಪೊಲೀಸರು ಐದು ಮಂದಿ ಆರೋಪಿಗಳನ್ನು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಮುಲ್ಕಿ ಕೋಲ್ನಾಡು ನಿವಾಸಿ ಶಶಿ ಪೂಜಾರಿ ಅಲಿಯಾಸ್ ಶ್ಯಾಡೋ (28), ರವಿಚಂದ್ರ ಪೂಜಾರಿ ಅಲಿಯಾಸ್ ವಿಕ್ಕಿ ಪೂಜಾರಿ (30), ಮಂಗಳೂರು ಪೆರ್ಮಂಕಿ ನಿವಾಸಿ ಧನರಾಜ್ ಪೂಜಾರಿ ಅಲಿಯಾಸ್ ಧನರಾಜ್ ಯಾನೆ ರಾಕ್, (26) ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳ ಮಾಹಿತಿಯ ಆಧಾರದ ಮೇಲೆ ಇಂದು ಬೆಳಿಗ್ಗೆ 7 ಗಂಟೆಗೆ ಮಲ್ಪೆಯಲ್ಲಿ ಪ್ರಕರಣದ ಇನ್ನೊಬ್ಬ ಆರೋಪಿ ಮಲ್ಪೆಯ ಕೊಳ ನಿವಾಸಿ ಧನರಾಜ್ ಸಾಲ್ಯಾನ್ ಅಲಿಯಾಸ್ ಧನು ಕೊಳ (30) ಹಾಗೂ ಮಲ್ಪೆ ನಿವಾಸಿ ಉಲ್ಲಾಸ ಶೆಣೈ ಯಾನೆ ಉಲ್ಲಾಸ್ ( 27) ಎಂಬಾತನನ್ನು ಉಡುಪಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಉಡುಪಿಯ ಉದ್ಯಮಿಯೊಬ್ಬರಿಗೆ ಹಫ್ತಾ ಹಣ ನೀಡುವಂತೆ ಬೆದರಿಕೆ ಹಾಕಿದ್ದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಾರ್ಚ್ 13ರಂದು ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಉಡುಪಿಯ ಡಿ.ಸಿ.ಐ.ಬಿ. ತಂಡವನ್ನು ಜಾಗೃತಗೊಳಿಸಲಾಗಿದ್ದು ಅದರಂತೆ ಡಿ.ಸಿ.ಐ.ಬಿ. ಘಟಕದ ಪೊಲೀಸ್ ನಿರೀಕ್ಷಕರಾದ ಸಿ. ಕಿರಣ್ ರವರು ತಮ್ಮ ತಂಡದೊಂದಿಗೆ ಪ್ರಕರಣದ ಪತ್ತೆಗೆ ಕಾರ್ಯತಂತ್ರವನ್ನು ರೂಪಿಸಿ, ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಿ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿತು.
ಬೆಂಗಳೂರಿನ ಜೆ.ಪಿ. ನಗರದಲ್ಲಿ ಕೂಲಂಕಷವಾಗಿ ಪರಿಶೀಲಿಸುವಾಗ ಬ್ರಿಗೇಡ್ ಅಡ್ಡ ರಸ್ತೆಯಲ್ಲಿರುವ ಬಾರೊಂದರ ಬಳಿ ಗುರುವಾರ ರಾತ್ರಿ 10.30 ಗಂಟೆ ಸುಮಾರಿ 3 ಜನರು ನಿಂತುಕೊಂಡು ಮಾತನಾಡುತ್ತಿದ್ದು, ಅವರನ್ನು ಸುತ್ತುವರಿದು ಬಂಧಿಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಬನ್ನಂಜೆ ರಾಜ ಈಗಾಗಲೇ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಬೇರೆ ಬೇರೆ ಪ್ರಕರಣಗಳಡಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಬಂಧಿಸಲಾಗಿರುವ ಆರೋಪಿಗಳು ಭೂಗತ ಪಾತಕಿ ಬನ್ನಂಜೆ ರಾಜನ ಸಹಚರರಾಗಿದ್ದು, ಬನ್ನಂಜೆ ರಾಜನ ಸೂಚನೆಯಂತೆ ಸದ್ರಿ ಆರೋಪಿಗಳು ತಮ್ಮ ಸ್ವಂತ ಲಾಭಕ್ಕಾಗಿ ಸಂಘಟನೆ (ಸಿಂಡಿಕೇಟ್) ಮಾಡಿಕೊಂಡು ಉಡುಪಿಯ ಪ್ರತಿಷ್ಠಿತ ವ್ಯಕ್ತಿಗಳು, ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ, ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಇನ್ನಿತರರನ್ನು ಗುರಿಯಾಗಿಸಿಕೊಂಡು ಅವರಿಗೆ ಹಫ್ತಾ ಹಣ ನೀಡುವಂತೆ ಬೇಡಿಕೆ ಇಟ್ಟು, ಹಣ ನೀಡದೇ ಇದ್ದಲ್ಲಿ ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಸಾರ್ವಜನಿಕರಲ್ಲಿ ಭಯ ಭೀತಿ ಉಂಟು ಮಾಡಿರುತ್ತಾರೆ. ಇವರ ವಿರುದ್ಧ ಮಂಗಳೂರು ಉತ್ತರ (ಬಂದರ್), ಪೂರ್ವ (ಕದ್ರಿ), ಬರ್ಕೆ, ಉರ್ವಾ, ಉಲ್ಲಾಳ, ಉಡುಪಿಯ ಮಣಿಪಾಲ, ಮಲ್ಪೆ ಮೊದಲಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.