ಸ್ಟಾರ್ಟ್ ಅಪ್ ಶ್ರೇಯಾಂಕ: ಗುಜರಾತ್, ಮೇಘಾಲಯ ಮತ್ತು ಕರ್ನಾಟಕ ಅತ್ಯುತ್ತಮ ಪ್ರದರ್ಶಕರು

ನವದೆಹಲಿ: ಉದ್ಯಮ ಮತ್ತು ಆಂತರಿಕ ವ್ಯಾಪಾರದ ಪ್ರಚಾರ ಇಲಾಖೆ (ಡಿಪಿಐಐಟಿ)ಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕದ ಪ್ರಕಾರ, ಉದಯೋನ್ಮುಖ ಉದ್ಯಮಿಗಳಿಗಾಗಿ(ಸ್ಟಾರ್ಟ್ ಅಪ್) ಆರಂಭಿಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಗುಜರಾತ್, ಮೇಘಾಲಯ ಮತ್ತು ಕರ್ನಾಟಕವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಾಗಿ ಹೊರಹೊಮ್ಮಿವೆ. ಕೇರಳ, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣವನ್ನು ಉನ್ನತ ಪ್ರದರ್ಶನಕಾರರು ಎಂದು ವರ್ಗೀಕರಿಸಲಾಗಿದೆ.

ರಾಜ್ಯಗಳ ಸ್ಟಾರ್ಟಪ್ ಶ್ರೇಯಾಂಕ 2021 ಅನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೋಮವಾರ ಬಿಡುಗಡೆ ಮಾಡಿದರು.

ಒಟ್ಟು 24 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳು ಇದರಲ್ಲಿ ಭಾಗವಹಿಸಿದ್ದವು. ಅತ್ಯುತ್ತಮ ಪ್ರದರ್ಶನಕಾರರು, ಉನ್ನತ ಪ್ರದರ್ಶನಕಾರರು, ನಾಯಕರು, ಮಹತ್ವಾಕಾಂಕ್ಷಿ ನಾಯಕರು ಮತ್ತು ಉದಯೋನ್ಮುಖ ಆರಂಭಿಕ ಪರಿಸರ ವ್ಯವಸ್ಥೆಗಳು ಎನ್ನುವ ಐದು ವಿಭಾಗಗಳ ಅಡಿಯಲ್ಲಿ ಅವುಗಳನ್ನು ಶ್ರೇಣೀಕರಿಸಲಾಗಿತ್ತು.

ಉದಯೋನ್ಮುಖ ಉದ್ಯಮಿಗಳನ್ನು ಉತ್ತೇಜಿಸಲು ಆರಂಭಿಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ತೆಗೆದುಕೊಂಡ ಉಪಕ್ರಮಗಳನ್ನು ಆಧರಿಸಿ ಶ್ರೇಯಾಂಕಗಳನ್ನು ನೀಡಲಾಗಿದೆ.