ಉಡುಪಿ: ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಯಾವುದೇ ಸರಕಾರ ಬಡವರಿಗೆ ನ್ಯಾಯವನ್ನು ಕೊಡುತ್ತಿರುವಾಗ ಇಲ್ಲಿಯವರೆಗೆ ಗ್ಯಾರಂಟಿ ಕಾರ್ಡ್‌ನ್ನು ಕೊಟ್ಟಿಲ್ಲ. ಗ್ಯಾರಂಟಿ ಕಾರ್ಡ್ ಕೊಡುತ್ತೇವೆ ಎಂಬುದರ ಅರ್ಥವೇನೆಂದರೆ ಜನ ತಮ್ಮನ್ನು ನಂಬುವುದಿಲ್ಲ ಎಂಬುದಾಗಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್‌ಗಳಿಗೆ ಯಾವುದೇ ವಾರಂಟಿ ಇಲ್ಲ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೂದಲಿಸಿದ್ದಾರೆ.
ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ಭಾನುವಾರ ನಡೆದ ಚುನಾವಣಾ ನಿರ್ವಹಣಾ ಸಮಿತಿಯ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾರಿಗೆ ತಂದಿರುವ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ ಮುಂತಾದ ಜನಪರ ಯೋಜನೆಗಳಿಗೆ ಯಾವುದೇ ಗ್ಯಾರಂಟಿ ಕಾರ್ಡ್ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಕೇಂದ್ರದಿಂದ 6,000 ರೂ. ರಾಜ್ಯದಿಂದ 4,000 ರೂ. ನೇರ ನಗದು ವರ್ಗಾವಣೆ ಮಾಡುತ್ತಿರುವ ಬಗ್ಗೆ ಯಾವುದೇ ಗ್ಯಾರಂಟಿ ಕಾರ್ಡ್ ನೀಡಿಲ್ಲ. ಈ ಎಲ್ಲ ವಿಚಾರಗಳನ್ನು ಬಿಜೆಪಿ ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಎಸ್‌ಸಿ., ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಜತೆಗೆ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದಿರುವ ಒಳ ಮೀಸಲಾತಿಯಿಂದ ಬಡವರ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನಾಂದಿ ಹಾಡಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು
ಉಡುಪಿ ಜಿಲ್ಲೆ ಹಾಗೂ ಉಡುಪಿ, ಕಾರ್ಕಳ, ಕಾಪು, ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ನಿರ್ವಹಣಾ ಸಮಿತಿಯ ವಿವಿಧ 24 ವಿಭಾಗಗಳ ಪ್ರತ್ಯೇಕ ಸಭೆಗಳನ್ನು ಆಯೋಜಿಸಲಾಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಸಮಾರೋಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಚುನಾವಣಾ ನಿರ್ವಹಣಾ ಸಮಿತಿಯ ಜಿಲ್ಲಾಸಂಚಾಲಕ ಮನೋಹರ್ ಎಸ್. ಕಲ್ಮಾಡಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾವಕ್ತಾರ ಕೆ.ರಾಘವೇಂದ್ರ ಕಿಣಿ ವಂದಿಸಿದರು.