ನವದೆಹಲಿ:ಮುಂದಿನ ವಾರದಿಂದ ಹಾಲು, ಅಕ್ಕಿ, ಮೊಸರು, ಇತರೆ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆಯಾಗಲಿದೆ. ಜಿಎಸ್‌ಟಿ ಕೌನ್ಸಿಲ್ ತನ್ನ 47 ನೇ ಸಭೆಯಲ್ಲಿ ಹಲವಾರು ದೈನಂದಿನ ಅಗತ್ಯ ವಸ್ತುಗಳ ದರವನ್ನು ಹೆಚ್ಚಿಸಲು ಸರ್ವಾನುಮತದಿಂದ ನಿರ್ಧರಿಸಿದೆ.
ಈ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆ ಜುಲೈ 18, ಸೋಮವಾರದಿಂದ ಜಾರಿಗೆ ಬರಲಿದೆ.
ಕಾನೂನು ಮಾಪನಶಾಸ್ತ್ರ ಕಾಯಿದೆಯ ಪ್ರಕಾರ ಪೂರ್ವ-ಪ್ಯಾಕ್ ಮಾಡಲಾದ ಮತ್ತು ಮೊದಲೇ ಲೇಬಲ್ ಮಾಡಲಾದ ಮೊಸರು, ಮಜ್ಜಿಗೆ ಮತ್ತು ಬೆಣ್ಣೆ, ಹಾಲು, ಪನೀರ್ ಇಂತಹ ವಸ್ತುಗಳ ಮೇಲೆ ಶೇಕಡಾ 5 ಜಿಎಸ್‌ಟಿ ಅನ್ವಯಿಸಲಿದೆ. ಇದರಿಂದಾಗಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಲಿದೆ.
ಪೂರ್ವ-ಪ್ಯಾಕೇಜ್ ಮಾಡಿದ ಅಥವಾ ಲೇಬಲ್ ಮಾಡಿದ ಅಕ್ಕಿ, ಗೋಧಿ, ಹಿಟ್ಟುಗಳು ಮುಂತಾದ ದೈನಂದಿನ ಆಹಾರಗಳ ಮೇಲಿನ ಈ ಹಿಂದಿದ್ದ ವಿನಾಯಿತಿಗಳನ್ನು ಹಿಂತೆಗೆದುಕೊಂಡಿದ್ದು, ಈಗ ಇವುಗಳ ಮೇಲೂ ಜಿಎಸ್‌ಟಿ ಅನ್ವಯವಾಗಲಿದೆ. ತಮ್ಮ ವಸ್ತುಗಳನ್ನು ಲೇಬಲ್ ಅಥವಾ ಬ್ರಾಂಡ್ ಮಾಡದೆ ಜಿಎಸ್‌ಟಿ ತಪ್ಪಿಸುತ್ತಿದ್ದ ಬ್ರಾಂಡೆಡ್ ಕಂಪನಿಗಳ ಮೇಲ್ವಿಚಾರಣೆ ಮಾಡಲು ವಿನಾಯತಿಯನ್ನು ಹಿಂಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ಇದರ ಜೊತೆಗೆ ಚೆಕ್‌ಗಳ ವಿತರಣೆಗೆ (ಸಡಿಲ ಅಥವಾ ಪುಸ್ತಕ ರೂಪದಲ್ಲಿ) ಬ್ಯಾಂಕ್‌ಗಳು ವಿಧಿಸುವ ಶುಲ್ಕದ ಮೇಲೆ 18 ಪ್ರತಿಶತ ಜಿಎಸ್‌ಟಿ ವಿಧಿಸಲಾಗುತ್ತದೆ. ಎಲ್ಇಡಿ ಲೈಟ್ಸ್, ಫಿಕ್ಚರ್ಗಳು, ಎಲ್ಇಡಿ ಲ್ಯಾಂಪ್ ಗಳ ಮೇಲೆ 18ಪ್ರತಿಶತ ಜಿಎಸ್‌ಟಿ ವಿಧಿಸಲಾಗಿದೆ. ಆಸ್ಪತ್ರೆಯ ಕೊಠಡಿ ಬಾಡಿಗೆಗೆ (ಐಸಿಯು ಹೊರತುಪಡಿಸಿ) ಪ್ರತಿ ರೋಗಿಗೆ ದಿನಕ್ಕೆ ರೂ 5000 ಮೀರಿದರೆ, ಐಟಿಸಿ ಇಲ್ಲದೆ ಕೊಠಡಿಗೆ 5 ಪ್ರತಿಶತದಷ್ಟು ಶುಲ್ಕ ವಿಧಿಸಲಾಗುತ್ತದೆ. ಹೋಟೆಲ್ ಕೊಠಡಿಗಳನ್ನು ದಿನಕ್ಕೆ 1,000 ರೂಪಾಯಿಗಳ ಅಡಿಯಲ್ಲಿ 12 ಪ್ರತಿಶತ ಜಿಎಸ್ಟಿ ಸ್ಲ್ಯಾಬ್ ಅಡಿಯಲ್ಲಿ ತರಲು ಜಿಎಸ್ಟಿ ಕೌನ್ಸಿಲ್ ನಿರ್ಧರಿಸಿದೆ.
ಜಿಎಸ್‌ಟಿ ದರ ಏರಿಕೆಯು ಅಡಿಗೆ ಬಜೆಟ್‌ನ ಮೇಲೆ ಪರಿಣಾಮ ಬೀರಿದರೆ, ಚಿಲ್ಲರೆ ವ್ಯಾಪಾರಿಗಳು ಸಹ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಜುಲೈ 18, 2022 ರ ಮೊದಲು ಮಾರಾಟ ಮಾಡಲು ಈಗಾಗಲೇ ತೆರಿಗೆ ಇನ್‌ವಾಯ್ಸ್ ಮಾಡಿಸಿಯಾಗಿದ್ದರೆ ಅಥವಾ ಜುಲೈ 18 ರ ಮೊದಲು ಮುಂಗಡವನ್ನು ಪಾವತಿಸಿದ್ದರೆ, ಹಳೆಯ ತೆರಿಗೆ ದರ ಅನ್ವಯಿಸುತ್ತದೆ ಅಥವಾ ವಿನಾಯಿತಿ ಉಳಿಯುತ್ತದೆ. ಉಳಿದ ಸಂದರ್ಭಗಳಲ್ಲಿ, ಹೊಸ ದರಗಳು ಅನ್ವಯಿಸುತ್ತವೆ. ಜುಲೈ 18 ರ ನಂತರ ಹೊಸದಾಗಿ ಸರಬರಾಜು ಮಾಡುವವರಿಗೆ ಹೊಸ ದರವನ್ನು ಅನ್ವಯಿಸಲಾಗುತ್ತದೆ, ಅಥವಾ ಯಾವುದೇ ವಿನಾಯಿತಿಯನ್ನು ಪಡೆಯುವುದಿಲ್ಲ.