ಕೋವಿಡ್ ಆತಂಕ ಆನಂತರ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ದುಃಖದಿಂದಾಗಿ ನಟ ಶಿವರಾಜಕುಮಾರ್, ಸುಮಾರು ನಾಲ್ಕು ವರ್ಷಗಳಿಂದ ಅದ್ಧೂರಿ ಬರ್ತ್ಡೇ, ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು. ಆದರೆ ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸಾರ್ವಜನಿಕವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲು ಶಿವರಾಜಕುಮಾರ್ ಸಮ್ಮತಿಸಿದ್ದು, ಅದಕ್ಕಾಗಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ.
ದಿನಪೂರ್ತಿ ಕಾರ್ಯಕ್ರಮ: ಜು.11ರ ಸಂಜೆಯಿಂದಲೇ ಶಿವರಾಜಕುಮಾರ್ ಅವರ ಹುಟ್ಟುಹಬ್ಬ ಕಾರ್ಯಕ್ರಮ ಆರಂಭವಾಗಲಿದ್ದು, ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ನಿವಾಸದಲ್ಲಿ ರಾತ್ರಿ 12 ಗಂಟೆಗೆ ಬೃಹತ್ ಕೇಕ್ ಕತ್ತರಿಸಲಾಗುತ್ತಿದ್ದು, ಬಳಿಕ ಸಿಡಿಮದ್ದು ಸಂಭ್ರಮಾಚರಣೆ ನಡೆಯಲಿದೆ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೊ ಖ್ಯಾತಿಯ ನಟ ಶಿವರಾಜಕುಮಾರ್ ಇದೇ ಜು.12ರಂದು 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಇನ್ನು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಶಿವಣ್ಣ ಜನ್ಮದಿನಕ್ಕೆ ಕ್ಷಣಗಣನೆ ಶುರುವಾಗಿದೆ.
ಭರದಿಂದ ನಡೆದಿದೆ ತಯಾರಿ: ಇನ್ನು ಶಿವರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಎರಡು ವಾರಗಳಿಂದಲೇ ಅಭಿಮಾನಿಗಳು ಭರದಿಂದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೊಸ ಸಿನಿಮಾಗಳ ಅಪ್ಡೇಟ್ ಇನ್ನು ಶಿವರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಮುಂಬರಲಿರುವ ಅವರ ಹೊಸ ಸಿನಿಮಾಗಳ ಒಂದಷ್ಟು ಅಪ್ಡೆàಟ್ ಸಿಗಲಿದೆ. ಮೂಲಗಳ ಪ್ರಕಾರ, ಶಿವಣ್ಣ ಅಭಿನಯದ ಮುಂಬರಲಿರುವ ಮೂರು-ನಾಲ್ಕು ಹೊಸ ಸಿನಿಮಾಗಳು ಅನೌನ್ಸ್ ಆಗಲಿದೆ. ಇದರ ಜೊತೆಗೆ ಈಗಾಗಲೇ ಚಿತ್ರೀಕರಣ ಪೂರೈಸಿರುವ “ಜೈಲರ್’, “ಕ್ಯಾಪ್ಟನ್ ಮಿಲ್ಲರ್’ ಸೇರಿದಂತೆ ಕೆಲ ಸಿನಿಮಾಗಳ ಸ್ಪೆಷಲ್ ಲುಕ್ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ.
ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ತಮ್ಮ ಸ್ವಗೃಹದಲ್ಲಿ ನಟ ಶಿವರಾಜಕುಮಾರ್ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಅಭಿಮಾನಿಗಳ ಜೊತೆಗೆ ಕೇಕ್ ಕತ್ತರಿಸಿ, ಸಂಭ್ರಮಾಚರಣೆ ಮಾಡಲಿದ್ದಾರೆ. ಬಳಿಕ 10.30ಕ್ಕೆ “ಕಂಠೀರವ ಸ್ಟುಡಿಯೋ’ದಲ್ಲಿರುವ ವರನಟ ಡಾ. ರಾಜಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ.
ಅದಾದ ನಂತರ 11.15ಕ್ಕೆ ಕೆ. ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಶಿವರಾಜಕುಮಾರ್ ಬರ್ತ್ಡೇ ಪ್ರಯುಕ್ತ “ಘೋಸ್ಟ್’ ಸಿನಿಮಾದ ಸ್ಪೆಷಲ್ ಟೀಸರ್ ಮತ್ತು ಸಾಂಗ್ ಬಿಡುಗಡೆಯಾಗಲಿದ್ದು, ಶಿವಣ್ಣ ಚಿತ್ರತಂಡ ಮತ್ತು ಅಭಿಮಾನಿಗಳ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ನಾಗವಾರದಲ್ಲಿರುವ ಶಿವಣ್ಣ ಅವರ ಸ್ವಗೃಹದಲ್ಲಿ ಅಭಿಮಾನಿಗಳಿಗೆ ಬಿರಿಯಾನಿ ವಿತರಣೆ ನಡೆಯಲಿದೆ. ಇದರ ಜೊತೆ ರಕ್ತದಾನ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 
								 
															





 
															 
															 
															











