ಉಡುಪಿ: ಚಾತುರ್ಮಾಸ್ಯ ವ್ರತಾಚರಣೆಗಾಗಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಂಗಳವಾರ ನವಿಮುಂಬೈ ಮಹಾನಗರಕ್ಕೆ ಆಗಮಿಸಿದರು. ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶ್ರೀಪಾದರಿಗೆ ಭವ್ಯ ಸ್ವಾಗತ ನೀಡಲಾಯಿತು.
ಗುರುವಾಯೂರಪ್ಪ ದೇವಾಲಯದಿಂದ ಆರಂಭಗೊಂಡ ಪುರಪ್ರವೇಶ ಮೆರವಣಿಗೆಯಲ್ಲಿ ವೇದಘೋಷ, ಭಜನೆ, ಯಕ್ಷಗಾನ, ನೃತ್ಯ, ಕೊಂಬು–ಕಹಳೆ, ನಾಗಸ್ವರ ಸೇರಿದಂತೆ ವಿವಿಧ ವಾದ್ಯಗೋಷ್ಠಿಗಳು ಮೆರುಗು ನೀಡಿದವು. ದೇವಾಲಯದ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಭಕ್ತರು ಶ್ರೀಪಾದರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡರು.
ತಮ್ಮ ಆರಾಧ್ಯಮೂರ್ತಿ ಶ್ರೀ ವಿಠಲ ದೇವರೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಶ್ರೀಪಾದರು, ನವಿಮುಂಬೈನಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಶ್ರೀ ಪುತ್ತಿಗೆ ಮಠದ ಶಾಖೆಯನ್ನು ಪ್ರವೇಶಿಸಿದರು. ಮಳೆಯ ನಡುವೆಯೂ ಭಕ್ತರು ಶ್ರದ್ಧೆ ಮತ್ತು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಬಳಿಕ ಮಠದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾದ ಗೋಪಾಲ ವೈ. ಶೆಟ್ಟಿ ಮತ್ತು ಎನ್.ಆರ್. ರೈ, ಕಾರ್ಯಾಧ್ಯಕ್ಷ ಧರ್ಮದರ್ಶಿ ಅಣ್ಣಿ ಶೆಟ್ಟಿ, ಗೋಕುಲದ ಮಾಜಿ ಅಧ್ಯಕ್ಷ ಡಾ. ಸುರೇಶ್ ರಾವ್, ಅದಮಾರು ಮಠದ ಮುಖ್ಯ ಪ್ರಬಂಧಕ ರಾಜೇಶ್ ಭಟ್ ಹಾಗೂ ನೆಹರೂ ನಗರ ಪರಿಸರದ ನಗರಸೇವಕ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀಪಾದರು ದೀಪ ಪ್ರಜ್ವಲಿಸುವ ಮೂಲಕ ಚಾತುರ್ಮಾಸ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು, ಚಾತುರ್ಮಾಸ್ಯದ ಅವಧಿಯಲ್ಲಿ ವಿವಿಧ ಜ್ಞಾನ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಶ್ರೀ ಪಾಂಡುರಂಗ ವಿಠಲ ದೇವರ ಅನುಗ್ರಹದಿಂದ ಲೋಕಕ್ಕೆ ಮಂಗಳವಾಗಲಿ. ಇಲ್ಲಿನ ಜನರು ಹಾಗೂ ಭಗವದ್ಭಕ್ತರ ಜೀವನ ಸುಖ–ಶಾಂತಿ ಮತ್ತು ಭಕ್ತಿಭಾವದಿಂದ ಸಮೃದ್ಧವಾಗಲಿ ಎಂದು ಹಾರೈಸಿದರು.
ಸ್ಥಳೀಯ ಭಕ್ತ ಹಾಗೂ ಸಮಾಜಸೇವಕ ದಿನೇಶ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ವಿಕ್ರಮ್ ಕುಮಾರ್ ಕೊಂಟಾರ್ ವಂದಿಸಿದರು.
ಇಂದಿನಿಂದ ಚಾತುರ್ಮಾಸ್ಯ ವ್ರತ: ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಬುಧವಾರ ನವಿಮುಂಬೈನಲ್ಲಿ ವಿಧ್ಯುಕ್ತವಾಗಿ ಚಾತುರ್ಮಾಸ್ಯ ವ್ರತವನ್ನು ಸ್ವೀಕರಿಸಲಿದ್ದು, ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಜ್ಞಾನ ಕಾರ್ಯಕ್ರಮಗಳು ನಡೆಯಲಿವೆ.















