ಉಡುಪಿ: ರಾಜ್ಯದಲ್ಲಿನ ಗೋಮಾಳ ಭೂಮಿಗಳನ್ನು ಆಯಾ ಜಿಲ್ಲೆಗಳಲ್ಲಿನ ನೊಂದಾಯಿತಾ ಗೋಶಾಲೆಗಳ ಬೇಡಿಕೆಗಳಿಗೆ ಅನುಸಾರವಾಗಿ ಸೂಕ್ತ ನಿಯಮಾವಳಿಗಳೊಂದಿಗೆ ನೀಡುವ ಕುರಿತಂತೆ ಕಂದಾಯ ಸಚಿವ ಆರ್. ಅಶೋಕ್ ಸಮ್ಮತಿ ಸೂಚಿಸಿದ್ದಾರೆ.
ಈ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮಗೆ ಸಲ್ಲಿಸಿದ ಪತ್ರವನ್ನು ಸೋಮವಾರ ಉಡುಪಿಯಲ್ಲಿ ಸ್ವೀಕರಿಸಿ, ಸಮ್ಮತಿ ನೀಡಿದರು.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಿರುವುದರಿಂದ ಗೋ ರಕ್ಷಣೆಯ ಕಾರ್ಯಗಳಿಗೂ ಸರಕಾರ ಹೆಚ್ಚು ಗಮನ ಹರಿಸಬೇಕಾಗಿದೆ. ಗೋಮಾಳ ಭೂಮಿಗಳು ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಅತಿಕ್ರಮಣಗೊಂಡಿವೆ. ಆದರೂ ಈಗ ಉಳಿದಿರುವ ಭೂಮಿಗಳನ್ನು ಗೋಶಾಲೆಗಳಿಗೆ ನೀಡುವುದರಿಂದ ಸದರಿ ಭೂಮಿ ಸದುದ್ದೇಶಕ್ಕೆ ಬಳಕೆಯಾಗುತ್ತದೆ ಮತ್ತು ಗೋಶಾಲೆಗಳಿಗೆ ಬಲಬಂದಾಗುತ್ತದೆ ಎಂದು ಶ್ರೀಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉಡುಪಿಯಲ್ಲಿ ಲಭ್ಯವಿರುವ ಗೋಮಾಳ ಭೂಮಿಗಳ ವಿವರ ಮತ್ತು ಜಿಲ್ಲೆಯ ಗೋಶಾಲೆಗಳ ವಿವರವನ್ನು ಶೀಘ್ರ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು, ಪೇಜಾವರ ಶ್ರೀಗಳು ಗೋರಕ್ಷಣೆಯ ಬಗ್ಗೆ ಮಾಡುತ್ತಿರುವ ವಿಶೇಷ ಕಾರ್ಯಗಳನ್ನು ವಿವರಿಸಿದರು. ರಾಜ್ಯದೆಲ್ಲೆಡೆ ಗೋಶಾಲೆಗಳಿಗೆ ಬಲ ತುಂಬುವುದು ಶ್ರೀಗಳ ಕಾಳಜಿಯಾಗಿದೆ. ಆದ್ದರಿಂದ ಶ್ರೀಗಳ ಈ ಮನವಿಯನ್ನು ಅಂಗೀಕರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಶ್ರೀಗಳ ಪರವಾಗಿ ವಾಸುದೇವ ಭಟ್ ಪೆರಂಪಳ್ಳಿ ಮತ್ತು ಎಸ್.ವಿ. ಭಟ್ ಸಚಿವರನ್ನು ಭೇಟಿಮಾಡಿ ಶಾಲು ಹೊದಿಸಿ ಗೌರವಿಸಿ, ಮನವಿ ಅರ್ಪಿಸಿದರು .