ಬಿಪಿಎಲ್ ಕಾರ್ಡ್ ಆದಾಯ ಮಿತಿ ₹3 ಲಕ್ಷಕ್ಕೆ ಏರಿಸಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ!

ಬೆಂಗಳೂರು: ಬಿಪಿಎಲ್ (BPL) ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ. ಬಿಪಿಎಲ್ ಕಾರ್ಡ್‌ಗೆ ಅರ್ಹತೆ ಪಡೆಯಲು ಇರುವ ವಾರ್ಷಿಕ ಆದಾಯ ಮಿತಿಯನ್ನು ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಈ ಸಂಬಂಧ ಕ್ರಮಗಳು ಆರಂಭವಾಗಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ ಆದಾಯ ಮಿತಿ ಹೆಚ್ಚಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದರು.

ಇದೇ ವೇಳೆ, ಸುಮಾರು ₹6,000 ಕೋಟಿ ವೆಚ್ಚದ ‘ಇಂದಿರಾ ಕಿಟ್’ ಯೋಜನೆಯ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ಎರಡು ತಿಂಗಳೊಳಗೆ ಕಿಟ್ ವಿತರಣೆ ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಪ್ರಸ್ತಾವಿತ ಇಂದಿರಾ ಕಿಟ್‌ನಲ್ಲಿ 5 ಕೆಜಿ ಅಕ್ಕಿ, ತಲಾ 1 ಕೆಜಿ ತೊಗರಿಬೇಳೆ, ಹೆಸರಿಬೇಳೆ, ಸಕ್ಕರೆ, ಉಪ್ಪು ಹಾಗೂ 1 ಲೀಟರ್ ಅಡುಗೆ ಎಣ್ಣೆ ನೀಡಲು ಸರ್ಕಾರ ಯೋಜಿಸಿದೆ.

ಅನ್ನಭಾಗ್ಯ ಯೋಜನೆಯಡಿ ರಾಜ್ಯದ 4.42 ಕೋಟಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಿಸಲಾಗುತ್ತಿದ್ದು, ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿಯೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮುನಿಯಪ್ಪ ಹೇಳಿದರು.

ಪಡಿತರ ಚೀಟಿಗಳ ಪರಿಶೀಲನೆ ಕುರಿತು ಸ್ಪಷ್ಟನೆ ನೀಡಿದ ಅವರು, ಯಾವುದೇ ಪಡಿತರ ಚೀಟಿಯನ್ನು ರದ್ದುಪಡಿಸುವುದಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅರ್ಹತೆಯಿಲ್ಲದ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ಎಪಿಎಲ್ (APL) ವರ್ಗಕ್ಕೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕ ವಿತರಣಾ ವ್ಯವಸ್ಥೆ (PDS)ಯ ಆಹಾರಧಾನ್ಯಗಳ ಅಕ್ರಮ ಸಾಗಾಟ ತಡೆಯಲು ಇಲಾಖೆಯ ಗೋದಾಮುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಆಹಾರಧಾನ್ಯ ಸಾಗಣೆ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜೊತೆಗೆ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಸ್ಥಾಪಿಸಲಾಗಿದ್ದು, ತೂಕ ಮತ್ತು ಅಳತೆಗಳ ಮೇಲ್ವಿಚಾರಣೆಗಾಗಿ 33 ಹೊಸ ತಪಾಸಣಾ ವಾಹನಗಳನ್ನು ಒದಗಿಸಲಾಗಿದೆ.

ಆಹಾರಧಾನ್ಯಗಳ ಅಕ್ರಮ ಸಾಗಣೆ ವಿರುದ್ಧ ಇಲಾಖೆ ಇದುವರೆಗೆ 1,497 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಸುಮಾರು ₹50 ಕೋಟಿ ಮೌಲ್ಯದ ಪಿಡಿಎಸ್ ಆಹಾರಧಾನ್ಯಗಳನ್ನು ವಶಪಡಿಸಿಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.