ಹಂತ ಹಂತವಾಗಿ ಶಾಲಾ-ಕಾಲೇಜು ತೆರೆಯಲು ಸರ್ಕಾರ ನಿರ್ಧಾರ: ನವೆಂಬರ್ ನಲ್ಲಿ ಪದವಿ ಕಾಲೇಜು ಆರಂಭ ಸಾಧ್ಯತೆ

ಬೆಂಗಳೂರು: ರಾಜ್ಯ ಸರ್ಕಾರವು ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಿದ್ದು, ಅದರಂತೆ ಇಂದು ಸಿಎಂ ಜೊತೆಗೆ ಶಿಕ್ಷಕರು ತಜ್ಞರು ಹಾಗೂ ಆರೋಗ್ಯ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಮೊದಲ ಹಂತದಲ್ಲಿ ಪದವಿ ಕಾಲೇಜುಗಳನ್ನು, ಎರಡನೇ ಹಂತದಲ್ಲಿ 9 ತರಗತಿಯಿಂದ ದ್ವಿತೀಯ ಪಿಯುಸಿ ಹಾಗೂ ಮೂರನೇ ಹಂತದಲ್ಲಿ 1 ರಿಂದ 8 ನೇ ತರಗತಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಯುಕೆಜಿ, ಎಲ್ ಕೆಜಿ ಹಾಗೂ ಅಂಗನವಾಡಿಗಳನ್ನು ತೆರೆಯಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರವು ಈಗಾಗಲೇ ಶಾಲಾ ಕಾಲೇಜುಗಳನ್ನು ಆರಂಭಿಸಲು ಅನುಮತಿ‌ ನೀಡಿದೆ. ಕೇಂದ್ರದ ಮಾರ್ಗಸೂಚಿ ಪ್ರಕಟವಾದ ಬೆನ್ನಲ್ಲೇ ಯುಜಿಸಿ ಕೂಡ ನವೆಂಬರ್ ತಿಂಗಳಲ್ಲಿ ಕಾಲೇಜುಗಳನ್ನು ಆರಂಭಿಸಲು ಅವಕಾಶ ನೀಡಿದೆ.
ಈ ನಡುವೆ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ನವೆಂಬರ್ ಒಂದನೇ ವಾರ ಅಥವಾ ಎರಡನೇ ವಾರದಲ್ಲಿ ಪದವಿ ಕಾಲೇಜುಗಳು ಆರಂಭವಾಗಲಿದೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.