ಬೆಂಗಳೂರು: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸದ್ಯ ಒಂದು ವಾರದ ಲಾಕ್‌ಡೌನ್ ಜಾರಿಯಲ್ಲಿದ್ದು, ಅದು ಜುಲೈ 22ರ ಬುಧವಾರಕ್ಕೆ ಕೊನೆಗೊಳ್ಳಲಿದೆ.
ಈ ನಡುವೆ ಲಾಕ್ ಡೌನ್ ಅನ್ನು ಇನ್ನೊಂದು ವಾರ ಮುಂದುವರೆಸುವ ಸಾಧ್ಯತೆ ಇದೆ ಎಂಬಂತಹ ಸುದ್ದಿ ಹರಿದಾಡುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ‘ಲಾಕ್ ಡೌನ್ ಅನ್ನು ಮುಂದುವರಿಸುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ’ ಎನ್ನುವ ಮೂಲಕ ಲಾಕ್ ಡೌನ್ ಕುರಿತು ಹರಿದಾಡುತ್ತಿದ್ದ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಇಂದು ಬೆಂಗಳೂರಿನ ಎಂಟು ವಲಯಗಳ ಉಸ್ತುವಾರಿ ವಹಿಸಿರುವ ಸಚಿವರ ಸಭೆ ನಡೆಸಿದ ಅವರು, ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ದಾಖಲಾಗಲು ಆಗುತ್ತಿರುವ ತೊಡಕು ನಿವಾರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರಿಗೆ ತಾಕೀತು ಮಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಹಾಗೂ ಕೊರೊನೇತರ ರೋಗಿಗಳಿಗೆ ಸರಿಯಾದ ಚಿಕಿತ್ಸಾ ಸೌಲಭ್ಯ ದೊರಕುತ್ತಿದೆಯೇ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಬೇಕು. ರೋಗಲಕ್ಷಣ ಇಲ್ಲದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸದೇ, ಕೋವಿಡ್ ಕೇರ್ ಸೆಂಟರ್‌ಗಳಿಗೆ ಅಥವಾ ಹೋಂ ಕ್ವಾರಂಟೈನ್‌ಗೆ ಒಳಪಡಿಸಬೇಕು. ಆ ಮೂಲಕ ತೀವ್ರ ರೋಗಲಕ್ಷಣದಿಂದ ಬಳಲುತ್ತಿರುವ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂದು ಸಿಎಂ ಸೂಚಿಸಿದರು.
ಖಾಸಗಿ ಆಸ್ಪತ್ರೆಗಳು ಬೆಡ್ ನೀಡದೇ ಇದ್ದರೆ ಕಠಿಣ ಕ್ರಮಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ದಾಖಲಾತಿ ಮತ್ತು ಹಾಸಿಗೆಗಳ ಲಭ್ಯತೆ ಕುರಿತು ಮಾಹಿತಿ ಒದಗಿಸಲು ಸ್ವಯಂ ಸೇವಕರು ಹಾಗೂ ನೋಡಲ್ ಅಧಿಕಾರಗಳ ನೇಮಕ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.












