ಉಡುಪಿ: ಗೋಹತ್ಯಾನಿಷೇಧ ಕಾನೂನು ಜಾರಿಗೆ ತಂದ ಬಳಿಕ ರಾಜ್ಯ ಸರ್ಕಾರವು ಜಿಲ್ಲಾವಾರು ಗೋಶಾಲೆಗಳನ್ನು ಸ್ಥಾಪಿಸಲು ತ್ವರಿತ ಸಿದ್ಧತೆಗಳನ್ನು ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲೂ ಸರ್ಕಾರಿ ಗೋಶಾಲೆ ಸ್ಥಾಪನೆಗೆ ಪಶು ಸಂಗೋಪನಾ ಇಲಾಖೆ ನಿರ್ಧರಿಸಿದ್ದು, ಈ ಕುರಿತು ಉಡುಪಿ ಪೇಜಾವರ ಮಠದಲ್ಲಿ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಇಲಾಖೆಯ ಉಡುಪಿಯ ಉಪನಿರ್ದೇಶಕ ಶಂಕರ ಶೆಟ್ಟಿ, ಉಡುಪಿಯಲ್ಲಿ ಸರ್ಕಾರಿ ಗೋಶಾಲೆ ಸ್ಥಾಪನೆಯ ಕುರಿತಾಗಿ ಸರ್ಕಾರದ ಸೂಚನೆಯನ್ನು ವಿವರಿಸಿದರು .
ಸದ್ರಿ ಗೋಶಾಲೆಯು ಸರ್ಕಾರದ ನಿರ್ದೇಶಾನುಸಾರವೇ ನಡೆಯಬೇಕಾಗಿದೆ. ಆದರೆ ಉಡುಪಿಯ ಶಾಸಕರುಗಳು ಮತ್ತು ಇಲಾಖೆಯ ಚಿಂತನೆಯಂತೆ ಈಗಾಗಲೇ ಗೋಶಾಲೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಶ್ರೀ ಪೇಜಾವರ ಶ್ರೀಗಳ ಸಾರಥ್ಯದಲ್ಲೇ ಈ ನೂತನ ಗೋಶಾಲೆಯೂ ನಡೆದರೆ ಸುಸೂತ್ರವಾಗಿ ನಡೆಯುತ್ತದೆ. ಈ ನಿಟ್ಟಿನಲ್ಲಿ ಸುದೀರ್ಘ ಸಮಾಲೋಚನೆಯು ನಡೆಯಿತು.
ಅದರಂತೆ ಶ್ರೀಗಳ ನೇತೃತ್ವದ ಶ್ರೀ ವಿಶ್ವೇಶ ಕೃಷ್ಣ ಗೋಸೇವಾ ಟ್ರಸ್ಟ್ ಈ ಗೋಶಾಲೆಯ ನೇತೃತ್ವ ವಹಿಸಿ ಮುನ್ನಡೆಸುವುದು. ಈ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ ಹೆಬ್ರಿ ತಾಲೂಕು ಶಿವಪುರ ಗ್ರಾಮದ ಕೆರೆಬೆಟ್ಟಿನಲ್ಲಿರುವ 13.24ಎಕ್ರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಸದ್ರಿ ಟ್ರಸ್ಟ್ ಗೆ ನೀಡಿ ,ಸರ್ಕಾರದ ಅನುದಾನದಲ್ಲಿ ಗೋಶಾಲೆ ಸ್ಥಾಪಿಸುವ ಬಗ್ಗೆ ಇಲಾಖೆ ಮಂಡಿಸಿದ ಚಿಂತನೆಗೆ ಶ್ರೀಗಳು ಮತ್ತು ಸಭೆಯಲ್ಲಿ ಉಪಸ್ಥಿತರಿದ್ದ ಟ್ರಸ್ಟ್ ನ ಎಲ್ಲ ವಿಶ್ವಸ್ಥರೂ ಪೂರ್ಣ ಸಮ್ಮತಿಯನ್ನು ಸೂಚಿಸಿದರು .
ಸರ್ಕಾರದ ನಿಯಮಾವಳಿಗಳನ್ನು ಖಾತರಿಪಡಿಸಿಕೊಂಡು ಗೋಶಾಲೆಯನ್ನು ನಡೆಸಲು ಶ್ರೀಗಳು ಸಮ್ಮತಿಸಿದರು. ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಶ್ರೀಗಳವರಿಂದ ಸ್ವೀಕರಿಸಿದ ಉಪನಿರ್ದೇಶಕ ಶಂಕರ ಶೆಟ್ಟರು ಅದನ್ನು ಕೂಡಲೇ ಸರ್ಕಾರಕ್ಕೆ ಕಳಿಸಿ ಮುಂದಿನ ತೀರ್ಮಾನಗಳನ್ನು ಕೃಗೊಳ್ಳುವುದಾಗಿ ತಿಳಿಸಿದರು.
ಇಲಾಖೆಯ ನಿವೃತ್ತ ನಿರ್ದೇಶಕ ಡಾ ಸರ್ವೋತ್ತಮ ಉಡುಪ , ಶ್ರೀ ವಿಶ್ವೇಶಕೃಷ್ಣ ಗೋಸೇವಾ ಟ್ರಸ್ಟ್ ಅಧ್ಯಕ್ಷ ಪದನಾಭ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು .