ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಬಸ್‌ಪಾಸ್ ಶುಲ್ಕ ಮರುಪಾವತಿ; ಜೂನ್ 29ರಿಂದ ಅರ್ಜಿ ಪ್ರಕ್ರಿಯೆ ಆರಂಭ

ಬೆಂಗಳೂರು: ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಯೋಜನೆ ಜಾರಿಗೆ ತಂದಿರುವ ಬೆನ್ನಲ್ಲೇ, ಈಗಾಗಲೇ ಬಸ್‌ಪಾಸ್‌ಗಾಗಿ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ವಿದ್ಯಾರ್ಥಿಗಳಿಂದ ವಸೂಲಿಯಾಗಿರುವ ಬಸ್‌ಪಾಸ್ ಶುಲ್ಕವನ್ನು ಮರುಪಾವತಿ ಮಾಡಲು ನಾಲ್ಕು ರಾಜ್ಯ ಸಾರಿಗೆ ನಿಗಮಗಳಿಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರದ ನಿರ್ದೇಶನದಂತೆ, ಈಗಾಗಲೇ ನಿಯಮಾನುಸಾರ ಶುಲ್ಕ ಪಾವತಿಸಿ ಬಸ್‌ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಆ ಹಣವನ್ನು ಹಿಂದಿರುಗಿಸಲಾಗುತ್ತದೆ. ಈ ಮರುಪಾವತಿ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯೂಕೆಆರ್‌ಟಿಸಿ)ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಜಂಟಿಯಾಗಿ ನಡೆಸಲಿವೆ.

ಅರ್ಹ ವಿದ್ಯಾರ್ಥಿಗಳು ಜೂನ್ 29ರಿಂದ Seva Sindhu ಪೋರ್ಟಲ್ ಮೂಲಕ ಮರುಪಾವತಿಗಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ:

  • ಸೇವಾಸಿಂಧು ಪೋರ್ಟಲ್‌ನಲ್ಲಿ ಒಟಿಪಿ (OTP) ಮೂಲಕ ನೋಂದಣಿ ಕಡ್ಡಾಯ.
  • ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ಸರಿಯಾದ ವಿವರಗಳನ್ನು ನಮೂದಿಸಬೇಕು.
  • ಅರ್ಜಿಯ ಪರಿಶೀಲನೆ ಪೂರ್ಣಗೊಂಡ ಬಳಿಕ, NEFT ಅಥವಾ RTGS ಮೂಲಕ 7 ದಿನಗಳೊಳಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮರುಪಾವತಿ ಮೊತ್ತವನ್ನು ನೇರವಾಗಿ ಜಮೆ ಮಾಡಲಾಗುತ್ತದೆ.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಸೇರಿದಂತೆ ಎಲ್ಲ ಮಾಹಿತಿಯನ್ನು ನಿಖರವಾಗಿ ನಮೂದಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.