ಬೆಂಗಳೂರು: ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಯತ್ನಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನ ಮಂಡಲದಿಂದ ತಮಗೆ ಒದಗಿಸಿದ್ದ ಕಾರು ಮತ್ತು ಬಂಗಲೆಯನ್ನು ಮರಳಿಸಿದ್ದಾರೆ.
ಡಿಸೆಂಬರ್ 15ರಂದು ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಯತ್ನಿಸಿದ್ದರು. ಅದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಬಳಿಕ ಸದನದ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿತ್ತು.
ಅಧಿವೇಶನ ಮುಗಿಸಿ ಉಡುಪಿಗೆ ತೆರಳಿದ ಪ್ರತಾಪಚಂದ್ರ ಶೆಟ್ಟಿ ಅವರು ಶನಿವಾರವೇ ಕಾರನ್ನು ವಾಪಸ್ ಕಳುಹಿಸಿದ್ದಾರೆ. ಬಂಗಲೆಯನ್ನೂ ತೆರವು ಮಾಡಿದ್ದು, ಸ್ವಾಧೀನಕ್ಕೆ ಪಡೆಯುವಂತೆ ವಿಧಾನಮಂಡಲ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.