ಇಂದು ಮಧ್ಯರಾತ್ರಿಯಿಂದಲೇ ಸರಕಾರಿ ಬಸ್ ದರ ಏರಿಕೆ! ಎಷ್ಟು ಏರಿದೆ ಪ್ರಯಾಣ ದರ?

ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರವನ್ನೂ ಪರಿಷ್ಕರಿಸಲಾಗಿದೆ. ವಾಯವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರದಲ್ಲಿ ಶೇ.23ರಷ್ಟು ಹಾಗೂ ಬಿಎಂಟಿಸಿ ಬಸ್‌ಗಳ ಪ್ರಯಾಣ ದರದಲ್ಲಿ ಶೇ.35ರಷ್ಟು ಹೆಚ್ಚಳ ಮಾಡಲಾಗಿದೆ. ಹೊಸ ದರಗಳು ಇಂದೇ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಾರಿಗೆ ಸಚಿವ ಬೈರತಿ ಸುರೇಶ್, ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಹಾಗೂ ಸಾರಿಗೆ ನಿಗಮಗಳ ಮೇಲಿನ ಸಾಲ ಮತ್ತು ಹೊಣೆಗಾರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕಳೆದ 10 ವರ್ಷಗಳಲ್ಲಿ ಬಿಎಂಟಿಸಿಯಲ್ಲಿ ಒಂದು ಬಾರಿ ಹಾಗೂ ಉಳಿದ ಮೂರು ಸಾರಿಗೆ ನಿಗಮಗಳಲ್ಲಿ ಎರಡು ಬಾರಿ ಮಾತ್ರ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಇದರಿಂದ ನಿಗಮಗಳು ಆರ್ಥಿಕ ನಷ್ಟ ಎದುರಿಸುತ್ತಿದ್ದು, ನಷ್ಟದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡರು.

ಸಾರಿಗೆ ನಿಗಮಗಳ ಆರ್ಥಿಕ ಹೊರೆ ಎಷ್ಟು?

ರಾಜ್ಯದಲ್ಲಿ ಪ್ರಸ್ತುತ ನಾಲ್ಕು ಸಾರಿಗೆ ನಿಗಮಗಳ ಅಡಿಯಲ್ಲಿ 25,125 ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1.3 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 24,179 ಮಾರ್ಗಗಳಲ್ಲಿ ಬಸ್ ಸಂಚಾರ ನಡೆಯುತ್ತಿದೆ. ನಾಲ್ಕು ನಿಗಮಗಳ ಮೂಲಕ ಪ್ರತಿದಿನ ಸುಮಾರು 1.24 ಕೋಟಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಶಕ್ತಿ ಯೋಜನೆಯಡಿ ಪ್ರತಿದಿನ ಸುಮಾರು 74 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

ಶಕ್ತಿ ಯೋಜನೆಯಿಂದ ನಿಗಮಗಳಿಗೆ ನಷ್ಟವಾಗುತ್ತಿಲ್ಲ. ಮಹಿಳೆಯರ ಉಚಿತ ಪ್ರಯಾಣಕ್ಕೆ ಪ್ರತಿ ಟಿಕೆಟ್‌ಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಆದರೆ, ಡೀಸೆಲ್ ಬೆಲೆ ಮತ್ತು ನೌಕರರ ವೇತನ ಹೆಚ್ಚಳದಿಂದ ನಿಗಮಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಪ್ರಸ್ತುತ ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 98 ರೂ. ಇದ್ದು, ಕಳೆದ ಒಂದೂವರೆ ವರ್ಷದಲ್ಲಿ 10.47 ರೂ. ಹೆಚ್ಚಳವಾಗಿದೆ. ನಿಗಮಗಳ ಒಟ್ಟು ವೆಚ್ಚದಲ್ಲಿ ಸುಮಾರು ಶೇ.80ರಷ್ಟು ಹಣ ಡೀಸೆಲ್ ಮತ್ತು ಸಿಬ್ಬಂದಿ ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ಇಂಧನ ಖರೀದಿಗೆ ಸಂಬಂಧಿಸಿದಂತೆ 1,011 ಕೋಟಿ ರೂ. ಬಾಕಿಯಿದೆ ಎಂದು ತಿಳಿಸಿದರು.

ನಾಲ್ಕು ಸಾರಿಗೆ ನಿಗಮಗಳ ಒಟ್ಟು ಬಾಕಿ ಮತ್ತು ಹೊಣೆಗಾರಿಕೆ 7,719 ಕೋಟಿ ರೂ.ಗಳಾಗಿದ್ದು, 2,192 ಕೋಟಿ ರೂ. ಸಾಲವಿದೆ. ಒಟ್ಟಾರೆ 9,912 ಕೋಟಿ ರೂ.ಗಳ ಆರ್ಥಿಕ ಹೊರೆ ನಿಗಮಗಳ ಮೇಲಿದೆ. ಶಕ್ತಿ ಯೋಜನೆಯಡಿ ಸರ್ಕಾರದಿಂದ ಸುಮಾರು 5 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಪ್ರತಿ ವರ್ಷ ಸಾರಿಗೆ ನಿಗಮಗಳಿಗೆ ಸುಮಾರು 16 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದ್ದು, 2 ಸಾವಿರ ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಯಾವ ಬಸ್‌ಗಳಲ್ಲಿ ಎಷ್ಟು ದರ ಏರಿಕೆ?

ಹೊಸ ದರ ಪರಿಷ್ಕರಣೆಯ ಪ್ರಕಾರ ಸಾಮಾನ್ಯ ಸಾರಿಗೆಯಲ್ಲಿ ನೆಲಮಂಗಲದಿಂದ ಪ್ರಯಾಣಿಸಲು ಈ ಹಿಂದೆ 35 ರೂ. ಇದ್ದ ದರವನ್ನು 44 ರೂ.ಗೆ ಹೆಚ್ಚಿಸಲಾಗಿದೆ. ವೇಗದೂತ ಸಾರಿಗೆಗಳಲ್ಲಿ ಗರಿಷ್ಠ 18 ರೂ.ವರೆಗೆ ದರ ಏರಿಕೆ ಮಾಡಲಾಗಿದೆ.

ಬಿಎಂಟಿಸಿ ಸಾಮಾನ್ಯ ಬಸ್‌ಗಳ ಪ್ರಯಾಣ ದರದಲ್ಲಿ ಕಿಲೋಮೀಟರ್ ಆಧಾರದಲ್ಲಿ ಹೆಚ್ಚಳ ಮಾಡಲಾಗಿದೆ.

  • 2 ಕಿ.ಮೀ.ವರೆಗಿನ ಪ್ರಯಾಣಕ್ಕೆ 4 ರೂ. ಹೆಚ್ಚಳ.
  • 2ರಿಂದ 4 ಕಿ.ಮೀ.ವರೆಗಿನ ಪ್ರಯಾಣಕ್ಕೆ 6 ರೂ. ಹೆಚ್ಚಳ.
  • ದೂರದ ಪ್ರಯಾಣಕ್ಕೆ 12 ರೂ.ವರೆಗೆ ಹೆಚ್ಚಳ.

ಹವಾನಿಯಂತ್ರಿತ ಬಸ್‌ಗಳ ಪ್ರಯಾಣವೂ ದುಬಾರಿ

ಬಿಎಂಟಿಸಿ ವ್ಯಾಪ್ತಿಯಲ್ಲಿ ಸಂಚರಿಸುವ ಹವಾನಿಯಂತ್ರಿತ ಬಸ್‌ಗಳ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದೆ.

  • 6 ಕಿ.ಮೀ.ವರೆಗಿನ ಪ್ರಯಾಣಕ್ಕೆ 5 ರೂ. ಹೆಚ್ಚಳ.
  • 6ರಿಂದ 18 ಕಿ.ಮೀ.ವರೆಗಿನ ಪ್ರಯಾಣಕ್ಕೆ 10 ರೂ. ಹೆಚ್ಚಳ.
  • ದೂರದ ಪ್ರಯಾಣಕ್ಕೆ 15 ರೂ. ಹೆಚ್ಚಳ.

2023ರಲ್ಲಿ ಎಂ.ಆರ್. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆ ಕುರಿತು ಸಮಿತಿ ರಚಿಸಲಾಗಿತ್ತು. ಬಳಿಕ ಅತುಲ್ ಕುಮಾರ್ ತಿವಾರಿ ನೇತೃತ್ವದಲ್ಲಿಯೂ ಸಮಿತಿ ರಚಿಸಿ, ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿಗಳ ಕುರಿತು ವರದಿ ಪಡೆಯಲಾಗಿತ್ತು. ಈ ವರದಿಗಳ ಆಧಾರದ ಮೇಲೆ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.