ಉಡುಪಿ: ಡಿಸೇಲ್ ದರ ನಿರಂತರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಗಳ ದರ ಪರಿಷ್ಕರಣೆ ಏಕಕಾಲದಲ್ಲಿ ಮಾಡುವಂತೆ ರಾಜ್ಯ ಸರಕಾರಕ್ಕೆ ಕರ್ನಾಟಕ ರಾಜ್ಯ ಬಸ್ ಮಾಲೀಕರ ಒಕ್ಕೂಟ ಆಗ್ರಹಿಸಿದೆ.
ಸರ್ಕಾರಿ ಸೌಮ್ಯದ ಬಿಎಂಟಿಸಿ, ಕೆಎಸ್ಆರ್ ಟಿಸಿ, ಎನ್ ಡಬ್ಲೂಕೆಆರ್ ಟಿಸಿ, ಎನ್ ಇಕೆಆರ್ ಟಿಸಿ ಬಸ್ ದರವನ್ನು ಶೇ. 20ರಷ್ಟು ಹೆಚ್ಚಳ ಮಾಡಬೇಕೆಂದು ಮನವಿಯನ್ನು ಸಲ್ಲಿಸಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ಬಸ್ ಮಾಲೀಕರ ಒಕ್ಕೂಟವು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಾರಿಗೆ ಸಚಿವರ ಮತ್ತು ಅಧಿಕಾರಿಗಳ ಸಭೆಯಲ್ಲಿ ಸಲ್ಲಿಸಲಾದ ರಾಜ್ಯದಲ್ಲಿ ಏಕರೂಪದಲ್ಲಿ ದರ ಪರಿಷ್ಕರಣೆ ಆಗಬೇಕೆಂಬ ಬೇಡಿಕೆಗೆ ರಾಜ್ಯದ ಸಾರಿಗೆ ಸಚಿವರು ಸೂಕ್ತವಾಗಿ ಸ್ಪಂದಿಸಿದ್ದಾರೆ.
ಅದರಂತೆ ಸರಕಾರಿ ಒಡೆತನದ ಸಾರಿಗೆ ನಿಗಮಗಳಿಗೆ ದರ ಹೆಚ್ಚು ಮಾಡುವ ಸಮಯದಲ್ಲೇ ರಾಜ್ಯದ ಖಾಸಗಿ ಸಾರಿಗೆ ಸಂಸ್ಥೆಗಳಿಗೂ ಒಂದೇ ಕಾಲದಲ್ಲಿ ದರ ಪರಿಷ್ಕರಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಬಸ್ ಮಾಲೀಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ಒತ್ತಾಯಿಸಿದ್ದಾರೆ.