ಕುಂದಾಪುರ: ಕರಾವಳಿಯಲ್ಲಿ ಹಿಂದುಳಿದ ವರ್ಗದ ಮತದಾರರನ್ನು ಓಲೈಸುತ್ತಿರುವ ಬಿಜೆಪಿ ಪಕ್ಷ ಹಿಂದುಳಿದ ವರ್ಗದವರನ್ನು ಅಭ್ಯರ್ಥಿಯನ್ನಾಗಿಸಿಲ್ಲ. ಓಟಿಗಾಗಿ ಮಾತ್ರ ಹಿಂದುಳಿದ ವರ್ಗದವರನ್ನು ದಾಳವಾಗಿಸಿಕೊಂಡು ಇಡೀ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಎಸಗುತ್ತಿದೆ. ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು ಸ್ವಂತ ವರ್ಚಸ್ಸಿಲ್ಲದೇ ಹೆಣಗಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದರು.
ಅವರು ಸೋಮವಾರ ಕುಂದಾಪುರದ ಖಾಸಗಿ ಹೋಟೇಲ್ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ನರೇಂದ್ರ ಮೋದಿ ವಾರಣಾಸಿಯಲ್ಲಿ ಸ್ವರ್ಧೆ ಮಾಡುತ್ತಿದ್ದಾರೆ. ಆದರೆ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಲ್ಲಿಯೂ ಮೋದಿಗೆ ಓಟು ನೀಡಿ ಎನ್ನುತ್ತಿದ್ದಾರೆ. ಶೋಭಾ ಕರಂದ್ಲಾಜೆ ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಮೋದಿಯವರಿಗೆ ಮತ ನೀಡಿ ಎನ್ನುತ್ತಿದ್ದಾರೆ. ಐದು ವರ್ಷ ಉಡುಪಿ ಚಿಕ್ಕಮಂಗಳೂರಿನಲ್ಲಿ ಅಭ್ಯರ್ಥಿಯಾಗಿದ್ದವರು ತಮ್ಮ ಹಾಗೂ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದನ್ನು ಬಿಟ್ಟು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಚಾಳಿಯನ್ನು ಖಂಡಿಸಬೇಕಿದೆ. ಈ ಭಾಗದ ಸಮಸ್ಯೆಗೆ ಸ್ಪಂದಿಸುವ ಮೀನುಗಾರ ಮುಖಂಡ ಪ್ರಮೋದ್ ಮದ್ವರಾಜ್ ಅವರನ್ನು ಚುನಾಯಿಸಬೇಕಾಗಿದೆ ಎಂದರು.
ಉಡುಪಿ ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಚುನಾವಣೆ ಎದುರಿಸುತ್ತಿದೆ. ಉಡುಪಿ ಕ್ಷೇತ್ರದಲ್ಲಿ ಪ್ರಮೋದ್ ಮದ್ವರಾಜ್ ಅವರಿಗೂ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರ ತೆನೆ ಹೊತ್ತ ಮಹಿಳೆಯ ಗುರುತಿಗೆ ಮತ ನೀಡುವ ಮೂಲಕ ಸಮರ್ಥ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಈ ಭಾಗದ ಜನರು ಮಾಡಬೇಕಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರು ಬಾರಿ ಸತತ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಆದರೆ ಕೆಲಸ ಏನೂ ಆಗಿಲ್ಲ. ಇದು ಜನರ ಗಮನಕ್ಕೆ ಬಂದಿದೆ. ಹಾಗಾಗಿ ಈ ಬಾರಿ ಜನರು ಬದಲಾವಣೆ ಮಾಡಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಜಂಟಿ ಚುನಾವಣಾ ಪ್ರಚಾರ ವೇಗವಾಗಿ ನಡೆಯುತ್ತಿದೆ. ಬಿಜೆಪಿಯ ಯಾವುದೇ ಸಂದೇಶಗಳಿಗೂ ಜನ ಕಿವಿಗೊಡದೆ ಮೈತ್ರಿಕೂಟವನ್ನು ಬೆಂಬಲಿಸಲಿದ್ದಾರೆ. ಭದ್ರಾವತಿ, ತೀರ್ಥಹಳ್ಳಿಯಲ್ಲಿ ಡಿಕೆಶಿ ಅವರು ಚುನಾವಣಾ ಉಸ್ತುವಾರಿ ತಗೆದುಕೊಂಡಿದ್ದಾರೆ. ಬೈಂದೂರಿನಲ್ಲಿ ನಾನು ಉಸ್ತುವಾರಿ ತಗೆದುಕೊಂಡಿದ್ದೇನೆ. ಹೊಸ ರೀತಿಯಲ್ಲಿ ಚುನಾವಣಾ ತಂತ್ರಗಾರಿಕೆಯನ್ನು ಹೆಣೆದು ಕೆಲಸ ಮಾಡಲಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಶೋಕ್ ಪುತ್ರನ್, ಮುಜಾಯಿದ್ ಗಂಗೊಳ್ಳಿ ಇದ್ದರು.