ಬಾಕು (ಅಜರ್‌ಬೈಜಾನ್): ಇಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ನ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ವನಿತೆಯರ ಗುಂಪು ಚಿನ್ನದ ಪದಕ ಸಾಧಿಸಿದೆ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ನಲ್ಲಿ ತಿಯಾನಾ, ಸಾಕ್ಷಿ ಸೂರ್ಯವಂಶಿ ಮತ್ತು ಕಿರಣದೀಪ್ ಕೌರ್ ಅವರ ತಂಡ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿತು.
ತಿಯಾನಾ, ಸಾಕ್ಷಿ ಸೂರ್ಯವಂಶಿ ಮತ್ತು ಕಿರಣದೀಪ್ ಕೌರ್ ಅವರಿದ್ದ ತಂಡ ಚೀನಾ ಮತ್ತು ಮಂಗೋಲಿಯಾವನ್ನು ಮಣಿಸಿ ಪ್ರಶಸ್ತಿ ಗೆದ್ದಿದೆ. ಭಾರತದ ಈ ಮೂವರು 1573-6x ಅಂಕಗಳಿಸಿ ಅಗ್ರಸ್ಥಾನ ಪಡೆದರು. ಚೀನಾ 1567-9x ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದರೆ, ಮಂಗೋಲಿಯಾ 1566-3x ಸ್ಕೋರ್‌ನೊಂದಿಗೆ ಕಂಚು ಪಡೆಯಿತು.
ಪುರುಷರ 50 ಮೀ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಒಟ್ಟು 1646-28x ಸ್ಕೋರ್‌ನೊಂದಿಗೆ ವಿಕ್ರಮ್ ಜಗನ್ನಾಥ್ ಶಿಂಧೆ, ಕಮಲಜೀತ್ ಮತ್ತು ರವೀಂದರ್ ಸಿಂಗ್ ಅವರ ಭಾರತ ತಂಡ ಕಂಚಿನ ಪದಕ ಗಳಿಸಿದೆ. ಚೀನಾ ಚಿನ್ನ ಗೆದ್ದರೆ (1655-32x ಅಂಕಗಳು) ಕೊರಿಯಾ ಗಣರಾಜ್ಯಕ್ಕೆ (1654-30x) ಬೆಳ್ಳಿ ಜಯಿಸಿತು.
ಇಂದಿನ ಪದಕಗಳ ಸೇರ್ಪಡೆಯೊಂದಿಗೆ ಭಾರತ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ನಲ್ಲಿ ಒಟ್ಟು 14 ಪದಕಗಳನ್ನು ಗೆದ್ದಿದ್ದು, 6 ಚಿನ್ನ ಮತ್ತು 8 ಕಂಚು ಒಳಗೊಂಡಿತ್ತು.
ಒಲಿಂಪಿಕ್ಸ್ನಲ್ಲಿ ಸ್ಥಾನ: ಬಾಕುವಿನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತೀಯ ಕ್ರೀಡಾಪಟುಗಳು ಮುಂದಿನ ವರ್ಷ ನಡೆಯುವ ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮಹಿಳೆಯರ ಟ್ರ್ಯಾಪ್ನಲ್ಲಿ ರಾಜೇಶ್ವರಿ ಕುಮಾರಿ, ಸಿಫ್ಟ್ ಕೌರ್ ಸಮ್ರಾ ಮಹಿಳೆಯರ 50 ಮೀ ರೈಫಲ್ನಲ್ಲಿ 3 ಸ್ಥಾನಗಳು, ಅಖಿಲ್ ಶೆರಾನ್ ಪುರುಷರ 50 ಮೀ ರೈಫಲ್ನಲ್ಲಿ 3 ಸ್ಥಾನಗಳು ಮತ್ತು ಮೆಹುಲಿ ಘೋಷ್ ಮಹಿಳೆಯರ 10 ಮೀ ಏರ್ ರೈಫಲ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. (ಎಎನ್ಐ)
ಭಾರತದ ತಿಯಾನಾ ಮತ್ತು ರವೀಂದರ್ ಸಿಂಗ್ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವೈಯಕ್ತಿಕ ಸ್ಪರ್ಧೆಗಳಲ್ಲಿ ಕಂಚು ಗೆದ್ದರು. ತಿಯಾನಾ 533 ಅಂಕಗಳೊಂದಿಗೆ ಮಹಿಳೆಯರ ಸೋಲೋ 50 ಮೀ ಪಿಸ್ತೂಲ್ ಫೈನಲ್‌ನಲ್ಲಿ 14 ಶೂಟರ್‌ಗಳಲ್ಲಿ ಮೂರನೇ ಸ್ಥಾನ ಪಡೆದರು. ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಕ್ರಮವಾಗಿ ಆಸ್ಟ್ರಿಯಾದ ಶೂಟರ್ ಸಿಲ್ವಿಯಾ ಸ್ಟೈನರ್ (540 ಅಂಕ) ಮತ್ತು ಮಂಗೋಲಿಯನ್ ಶೂಟರ್ ಬಯಾರ್ಟ್‌ಸೆಟ್ಸೆಗ್ ತುಮುರ್ಚುದುರ್ (534) ಗೆದ್ದರು. ವೈಯಕ್ತಿಕ 50 ಮೀಟರ್ ಪಿಸ್ತೂಲ್ ಪುರುಷರ ಫೈನಲ್‌ನಲ್ಲಿ, ರವೀಂದರ್ ಸಿಂಗ್ 556 ಅಂಕ ಪಡೆದರೆ, ಚೀನಾದ ಕ್ಸಿ ಯು (558) ಮತ್ತು ಲಾಟ್ವಿಯಾದ ಲಾರಿಸ್ ಸ್ಟ್ರಾಟ್‌ಮನಿಸ್ (557) ಕ್ರಮವಾಗಿ ಚಿನ್ನ, ಬೆಳ್ಳಿ ಗೆದ್ದಿದ್ದಾರೆ