ಉಡುಪಿಯ ಆರ್‌ಟಿಓ ಅಧಿಕಾರಿಯ ಮನೆಯಲ್ಲಿ ಕೋಟ್ಯಾಂತರ ರೂ. ನಗದು, ಚಿನ್ನ-ಬೆಳ್ಳಿ ಪತ್ತೆ!

ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀ ನಾರಾಯಣ ಪಿ.ನಾಯಕ್ ಅವರ ಕಚೇರಿ, ಮನೆ, ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಆರ್‌ಟಿಓ ಲಕ್ಷ್ಮೀನಾರಾಯಣ ನಾಯಕ್ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಆರ್‌ಟಿಓಗೆ ಸಂಬಂಧಿಸಿದ ವಾಸ್ತವ್ಯದ ಮನೆ, ಸಂಬಂಧಿಕರ ಮನೆ, ಆಪ್ತ ರವಿ ಶೇರಿಗಾರ್ ಮನೆ ಮತ್ತು ಆರ್‌ಟಿಓ ಕಛೇರಿ ಸೇರಿದಂತೆ ಒಟ್ಟು 5 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು ಶೋಧನಾ ಕಾರ್ಯವು ಮಂಗಳವಾರ ರಾತ್ರಿಯವರೆಗೂ ಮುಂದುವರೆದಿತ್ತು.
ಈವರೆಗೆ ನಡೆಸಲಾದ ಶೋಧ ಕಾರ್ಯದಲ್ಲಿ 2 ಮನೆಗಳು, ವಿವಿಧ ಸರ್ವೆ ನಂಬರಗಳಲ್ಲಿ 3 ನಿವೇಶನ, ಚಿನ್ನ, ಬೆಳ್ಳಿ, ಗೃಹೋಪಯೋಗಿ ವಸ್ತುಗಳು ಹಾಗೂ ಬ್ಯಾಂಕ್ ಖಾತೆಗಳಲ್ಲಿರುವ ಒಟ್ಟು ಮೌಲ್ಯ ಸೇರಿದಂತೆ ಒಟ್ಟು ಅಂದಾಜು 2,21,14,234ರೂ. ಕಂಡು ಬಂದಿದ್ದು ಶೇ.133.31ರಷ್ಟು ಅಕ್ರಮ ಆಸ್ತಿಪಾಸ್ತಿಗಳಿರುವುದು ಪತ್ತೆಯಾಗಿದೆ.

ತನಿಖೆ ಮುಂದುವರೆದಿದ್ದು, ಆರ್‌ಟಿಓ ಹೊಂದಿರುವ 1 ಬ್ಯಾಂಕ್ ಲಾಕರ್, ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.