ಉಡುಪಿ: ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 ಜಾರಿಗೆ ಬಂದಿದ್ದು, ಈ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಜೊತೆಗೆ ಕಾಯ್ದೆಯ ಉಲ್ಲಂಘನೆ ನಡೆಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ. ಚಾವ್ಹಾಣ್ ಹೇಳಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೂತನ ಕಾಯ್ದೆಯ ವ್ಯಾಪ್ತಿಯಲ್ಲಿ ಹಸು , ಕರು, ಎತ್ತು , ಹೋರಿಗಳನ್ನು ಸೇರಿಸಲಾಗಿದ್ದು, 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳು ಒಳಗೊಂಡಿದ್ದು, ಕಾಯ್ದೆಯನ್ನು ಮೊದಲ ಬಾರಿ ಉಲ್ಲಂಘಿಸಿದವರಿಗೆ 3 ರಿಂದ 6 ವರ್ಷ ಮತ್ತು ₹50 ಸಾವಿರದಿಂದ ₹5 ಲಕ್ಷದವರಗೆ ದಂಡ ಮತ್ತು ಎರಡನೇ ಬಾರಿ ಉಲ್ಲಂಘಿಸುವವರಿಗೆ ₹10 ಲಕ್ಷದವರೆಗೆ ದಂಡ ಹೆಚ್ಚಿಸಲಾಗಿದ್ದು, ಜಾನುವಾರುಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಣಿಕೆ ಮಾಡಬೇಕಾದರೆ ವೈದ್ಯರ ಪ್ರಮಾಣ ಪತ್ರ ಮತ್ತು ಮಾಲಿಕನ ವಿವರಗಳು ಹಾಗೂ ಪಶುಗಳಿಗೆ ಕಿವಿಯೋಲೆ ಹೊಂದಿರಬೇಕು.
ಸಾಗಾಣಿಕೆ ಮಾಡುವಾಗ ಒಂದು ವಾಹನದಲ್ಲಿ 5 ರಿಂದ 6 ಜಾನುವಾರುಗಳು ಮತ್ತು ಅವುಗಳಿಗೆ ಬೇಕಾಗುವ ಆಹಾರ ಹಾಗೂ ನೀರು ವಾಹನದಲ್ಲಿ ಇರಬೇಕು. ಗರ್ಭಧಾರಿತ ಜಾನುವಾರುಗಳ ಸಾಗಾಣಿಕೆ ಮಾಡಲು ಅವಕಾಶವಿಲ್ಲ. ಸಾಗಾಣಿಕೆ ಮಾಡುವಾಗ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಯಾವುದೇ ಅವಕಾಶವಿರುವುದಿಲ್ಲ. ಬೇಸಿಗೆ ಕಾಲದಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಬಾರದು ಎಂದರು.
ಪಶುವೈಧ್ಯಾಧಿಕಾರಿಗಳು ಜನರಲ್ಲಿ ಜಾನುವಾರುಗಳ ರಕ್ಷಣೆಯ ಜಾಗೃತಿ ಮೂಡಿಸಬೇಕು. ಪಶು ವೈದ್ಯಾಧಿಕಾರಿಗಳು ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆಸಬೇಕು, ಗೋಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕು. ಗ್ರಾಮಗಳಿಗೆ ತೆರಳಿ ಅಲ್ಲಿನ ಸಾರ್ವಜನಿಕರ ಪರಿಹರಿಸಬೇಕು. ಗ್ರಾಮಸಭೆಗಳಲ್ಲಿ ನೂತನ ಕಾಯ್ದೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಕರ್ನಾಟಕದಲ್ಲಿ ಗೋ ಹತ್ಯ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ ಮಾಡಬೇಕು ಎಂದರು.
ಸಾರ್ವಜನಿಕರು ಜಾನುವಾರುಗಳನ್ನು ಸಾಕಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಜಾನುವಾರುಗಳಿಗೆ ಮೇವು ಪೂರೈಕೆಯ ಜೊತೆಗೆ ವಿವಿಧ ಯೋಜನೆಯಡಿ ಅನುದಾನಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಜಾನುವಾರುಗಳು ಹೆಚ್ಚು-ಹೆಚ್ಚು ಕಂಡುಬಂದಲ್ಲಿ ಅವುಗಳನ್ನು ರಕ್ಷಿಸಲು ಗೋಶಾಲೆಗಳನ್ನು ಸರಕಾರದ ಗೋಮಾಳ ಜಮೀನಿನಲ್ಲಿ ನಿರ್ಮಿಸಿ ಅವುಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸಬೇಕು. ಇದುವರೆಗೂ ನೊಂದಣಿ ಹೊಂದದೆ ಇರುವ ಗೋಶಾಲೆಗಳನ್ನು ತ್ವರಿತ ಗತಿಯಲ್ಲಿ ನೊಂದಾಯಿಸಿಕೊಂಡು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗೋಶಾಲಾ ನಿರ್ವಹಣೆಗೆ ನರೇಗಾ ಯೋಜನೆ ಅಡಿಯಲ್ಲಿ ಗೋಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತದೆ. ಗೋಮಾಳ ಜಮೀನಿನಲ್ಲಿ ಮೇವುವನ್ನು ಬೆಳೆಸಲಾಗುತ್ತದೆ. ಅವುಗಳಿಗೆ ಸರಕಾರಿ ಅನುದಾನ ಬರುತ್ತದೆ. ಒಂದು ಗೋಶಾಲೆಯಲ್ಲಿ ಕನಿಷ್ಠ 50 ಜಾನುವಾರುಗಳು ಗರಿಷ್ಠ 200 ಜಾನುವಾರುಗಳು ಇರಬೇಕು ಎಂದರು.
ಪೇತ್ರಿ ಮತ್ತು ಕೊಕ್ಕರ್ಣೆ ಪ್ರದೇಶಗಳಲ್ಲಿ ಹೆಚ್ಚು ಜಾನುವಾರುಗಳು ಕಂಡುಬರುತ್ತವೆ. ಅವುಗಳ ರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು. ಪಶುಪಾಲನೆ ಕುರಿತು ಯೋಜನೆಗಳು ಮತ್ತು ಅನುದಾನಗಳ ಕುರಿತು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲೆಯ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಹರೀಶ ತಮಣ್ಕರ್ , ವಿವಿಧ ತಾಲೂಕುಗಳ ಪಶು ವೈದ್ಯಾಧಿಕಾರಿಗಳು, ಹಜ್ ಮತ್ತು ವಕ್ಫ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯ್ ಕುಮಾರ್ ಸ್ವಾಗತಿಸಿ ವಂದಿಸಿದರು.