»ಸುಲಭಾ ಆರ್.ಭಟ್, ಉಡುಪಿ
ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ.”ವ್ಹಾವ್ ಎಷ್ಟು ಚೆಂದ ಆಯ್ತಲ್ಲಾ ನನ್ನ ಹಳೆ ಸೀರೆಯ ಹೊಸ ಲುಕ್” ಅಂತ ನೀವೇ ನೋಡಿ ಖುಷಿ ಪಡ್ತೀರಿ. ಯಸ್”ಸೀರೆ ಸುಂದರವಾಗಿಯೂ ಆಕರ್ಷಕವಾಗಿಯೂ ಹಾಗೂ ಸ್ತ್ರೀಯರಿಗೆ ಗತ್ತುಗೈರತ್ತುಗಳನ್ನು ನೀಡುವಂತ ಉಡುಗೆ.
ಆದರೆ ಕೆಲವೊಮ್ಮೆ ಮತ್ತೆ ಮತ್ತೆ ಹಳೆಯ ಸೀರೆಗಳನ್ನೇ ಉಟ್ಟುಕೊಳ್ಳುವುದಕ್ಕೇ ಬೇಸರವೆಂದೆನಿಸುತ್ತದೆ ಅಲ್ಲವೇ?
ಹಾಗಿದ್ದಲ್ಲಿ ಆ ಹಳೆಯ ರೇಷ್ಮೆ ಸೀರೆಗಳನ್ನು ಮರುಬಳಸಬಹುದು. ಇದು ಹೇಗೆ ಸಾಧ್ಯ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕುಶನ್ -ತಲೆದಿಂಬಿಗೆ ಸೀರೆ ಕವರ್:
ಸೀರೆಗಳು ಸಾಕಷ್ಟು ದೀರ್ಘವಾಗಿರುತ್ತವೆ ಆದ್ದರಿಂದ ಹಳೆಯ ಸೀರೆಗಳನ್ನು ಕುಶನ್ ಹೊದಿಕೆಗಳ ರೂಪದಲ್ಲಿ ಹೇಗೆ ಮರುಬಳಸಿಕೊಳ್ಳಬಹುದು ಎನ್ನುತ್ತೀರಾ?
ಕೇವಲ ಒಂದೇ ಒಂದು ಸೀರೆಯನ್ನು ಬಳಸಿಕೊಂಡು ಹತ್ತಾರು ಕುಶನ್‍ಗಳನ್ನು ಹಾಗು ತಲೆದಿಂಬುಗಳನ್ನು ತಯಾರಿಸಬಹುದು. ಈ ಹೊದಿಕೆಗಳು ಆಕರ್ಷಕವಾಗಿ ಕಾಣುವಂತೆ ಮಾಡುವುದಕ್ಕಾಗಿ ಸೀರೆಯ ಅಂಚನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳಬಹುದು.
ಜೊತೆಗೆ ಈ ಸೀರೆಗಳ ಮೇಲೆ ಒಂದಿಷ್ಟು ಕಸೂತಿಗಳನ್ನು, ಗಾಜಿನ ಕುಸುರಿಕೆಲಸಗಳನ್ನು ಇಲ್ಲವೇ ಫ್ಯಾಬ್ರಿಕ್ ಪೇಂಟಿಂಗ್ ಮಾಡಬಹುದು. ಹಳೆಯ ಸೀರೆಗಳನ್ನು ಮರುಬಳಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಸಿಂಪಲ್ ಮಾರ್ಗ.
ಚೆಂದದ ಮನೆಗೆ ಅಂದದ ಕರ್ಟನ್:
ಹಳೆಯ ಸೀರೆಗಳನ್ನು ಪುನಃ ಬಳಸುವ ಮತ್ತೊಂದು ಉಪಾಯ ಏನೆಂದರೆ ಅವುಗಳನ್ನು ಕೊಠಡಿಗಳ ಕರ್ಟನ್‍ಗಳನ್ನಾಗಿ ಪರಿವರ್ತಿಸುವುದು. ಕೊಠಡಿಯ ಗೋಡೆಗಳಿಗೆ ನೀಡಲಾಗಿರುವ ಬಣ್ಣಕ್ಕೆ ಹೊಂದಾಣಿಕೆಯಾಗುವ ಬಣ್ಣದ ಹಳೆಯ ಸೀರೆಯನ್ನು ಬಳಸಿಕೊಂಡು ಕರ್ಟನ್‍ಗಳನ್ನು ರಚಿಸಿಕೊಳ್ಳಬಹುದು. ಹೀಗೆ ಮಾಡಿದ್ದಲ್ಲಿ ನಿಮ್ಮ ಕೊಠಡಿಯ ಅಂದ ಮತ್ತಷ್ಟು ಹೆಚ್ಚುತ್ತದೆ.
ಆಹಾ ಇದು ಸೀರೆಯ ಬೆಡ್‍ಶೀಟ್:
ಸಾಮಾನ್ಯವಾಗಿ ಬೆಡ್‍ಶೀಟ್‍ಗಳನ್ನು ಹಳೆಯ ಸೀರೆಗಳಿಂದಲೇ ಮಾಡಲಾಗುತ್ತದೆ. ಬೆಡ್‍ಶೀಟ್‍ಗಾಗಿ ಸೀರೆಯನ್ನು ಬಳಸಿಕೊಳ್ಳುವಾಗ ಆ ಸೀರೆಗೆ ಒಂದಿಷ್ಟು ಪ್ಯಾಚ್ ಅಥವಾ ಲೇಸ್ ಕೆಲಸ ಮಾಡುವುದರ ಮೂಲಕ ಅದು ತಲೆದಿಂಬಿನೊಂದಿಗೆ ಹೊಂದಾಣಿಕೆಯಾಗುವಂತೆ ಮಾಡಬೇಕು. ಅವೆರಡು ಜೊತೆಯಾದಾಗ ಅಂದವಾಗಿ ಕಾಣುತ್ತದೆ.
ಇಷ್ಟೆ ಅಲ್ಲ. ಹಳೆಯ ರೇಷ್ಮೆ ಸೀರೆಯನ್ನು ಸುಂದರವಾದ ಸಲ್ವಾರ್,ಸ್ಕರ್ಟ್, ಟಾಪ್‍ಗಳನ್ನಾಗಿ ಪರಿವರ್ತಿಸಬಹುದು. ಒಂದಿಷ್ಟು ಕಸೂತಿ ಕೆಲಸ. ಗ್ಲಾಸ್ ವರ್ಕ್, ಬೀಡ್ಸ್ ಮುಂತಾದವಿಗಳನ್ನು ಬಳಸಿ ನಿಮ್ಮ ಸೃಜನಶೀಲತೆ, ಕಲಾತ್ಮಕತೆಯನ್ನು ಆ ಸೀರೆಗೆ ನೀವು ಸೇರಿಸಿದಲ್ಲಿ ಅಂದವಾದ ಡ್ರೆಸ್ ರೆಡಿಯಾಗುತ್ತದೆ ಹಾಗೂ ಹಳೆಯ ಸೀರೆಗೆ ಹೊಸ ಲುಕ್ ಸಿಗುತ್ತದೆ.
(ಸುಲಭಾ ಆರ್ ಭಟ್ ಉಡುಪಿಯವರು. ಇವರು ಚಿತ್ರಕಲೆಯಲ್ಲಿ ಹೊಸತೇನಾದ್ರೂ ಮಾಡಬೇಕು ಅನ್ನುವ ಹಂಬಲವುಳ್ಳ ಸೃಜನಶೀಲ ಕಲಾವಿದೆ. ಚಿತ್ರಕಲೆ,ಬರವಣಿಗೆ ಇವರಿಗೆ ಜೀವನಪ್ರೀತಿ ಕೊಡುವ ಕ್ಷೇತ್ರಗಳು)