ಮಂಗಳೂರು: ಮಂಗಳೂರು ನಗರದ ಮುಂಬರುವ ಮಾಸ್ಟರ್ ಪ್ಲಾನ್ನಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ದೇಶದಲ್ಲಿ ಪಾದಚಾರಿಗಳ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಉಲ್ಲೇಖಿಸಿರುವ ಅವರು, ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ತಿಳಿಸಿದ್ದು, ಪಾದಚಾರಿ ಮೂಲಸೌಕರ್ಯ ಒದಗಿಸುವುದು ಹಾಗೂ ನಿರ್ವಹಿಸುವುದು ಸ್ಥಳೀಯ ಸಂಸ್ಥೆಗಳು ಮತ್ತು ಯೋಜನಾ ಪ್ರಾಧಿಕಾರಗಳ ಜವಾಬ್ದಾರಿ ಎಂದು ನೆನಪಿಸಿದ್ದಾರೆ. ಈ ಪತ್ರದ ಪ್ರತಿಯನ್ನು ನಗರಾಭಿವೃದ್ಧಿ ಸಚಿವರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತರಿಗೂ ಕಳುಹಿಸಲಾಗಿದೆ.
ಮಂಗಳೂರಿನ ಭವಿಷ್ಯದ ಅಭಿವೃದ್ಧಿಗೆ ಮಾರ್ಗದರ್ಶಿಯಾಗಲಿರುವ ಮಾಸ್ಟರ್ ಪ್ಲಾನ್ನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ವಿಶೇಷ ಗಮನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಕಾರ್ಮಿಕರು ಹಾಗೂ ದಿನನಿತ್ಯ ನಡಿಗೆಯನ್ನೇ ಅವಲಂಬಿಸಿರುವ ನಾಗರಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಮತ್ತು ಪಾದಚಾರಿ ಸ್ನೇಹಿ ಫುಟ್ಪಾತ್ಗಳ ನಿರ್ಮಾಣ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸಮಗ್ರ ಪಾದಚಾರಿ ಸಂಚಾರ ವ್ಯವಸ್ಥೆ ರೂಪಿಸುವಂತೆ ಆಗ್ರಹಿಸಿರುವ ಅವರು, ಅಡೆತಡೆ ರಹಿತ ಫುಟ್ಪಾತ್ಗಳು, ಶಾಲೆ-ಕಾಲೇಜು, ಆಸ್ಪತ್ರೆ, ಮಾರುಕಟ್ಟೆ ಹಾಗೂ ಸಾರಿಗೆ ಕೇಂದ್ರಗಳ ಬಳಿ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ, ವಿಶೇಷಚೇತನರಿಗೆ ಅನುಕೂಲಕರ ಮೂಲಸೌಕರ್ಯ, ಸಾರ್ವಜನಿಕ ಸಾರಿಗೆಯೊಂದಿಗೆ ಸಂಪರ್ಕ ಹಾಗೂ ಫುಟ್ಪಾತ್ಗಳ ಮೇಲಿನ ಅತಿಕ್ರಮಣ ಮತ್ತು ಅನಧಿಕೃತ ವಾಹನ ನಿಲುಗಡೆ ತಡೆಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಇದಲ್ಲದೆ, ಮಾಸ್ಟರ್ ಪ್ಲಾನ್ ಅಂತಿಮಗೊಳಿಸುವ ಮೊದಲು ನಗರದ ಸಮಗ್ರ ‘ವಾಕಬಿಲಿಟಿ ಆಡಿಟ್’ ನಡೆಸಿ ಪಾದಚಾರಿ ಸಂಚಾರದ ಸುರಕ್ಷತೆಯಲ್ಲಿರುವ ಲೋಪದೋಷಗಳನ್ನು ಗುರುತಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಅಳವಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಮಂಗಳೂರು ಐತಿಹಾಸಿಕವಾಗಿ ಅಚ್ಚುಕಟ್ಟಾದ ಹಾಗೂ ಪಾದಚಾರಿ ಸ್ನೇಹಿ ನಗರವಾಗಿ ಬೆಳೆದಿದೆ. ನಗರವು ವೇಗವಾಗಿ ವಿಸ್ತರಿಸುತ್ತಿರುವ ಈ ಸಂದರ್ಭದಲ್ಲಿ ಅದರ ಈ ವಿಶೇಷತೆಯನ್ನು ಉಳಿಸಿಕೊಂಡು ಬಲಪಡಿಸುವುದು ರಸ್ತೆ ಸುರಕ್ಷತೆ, ಸಾರ್ವಜನಿಕ ಆರೋಗ್ಯ, ಪರಿಸರ ಸುಸ್ಥಿರತೆ ಮತ್ತು ನಾಗರಿಕರ ಜೀವನದ ಗುಣಮಟ್ಟ ಹೆಚ್ಚಿಸಲು ನೆರವಾಗಲಿದೆ” ಎಂದು ಕ್ಯಾ. ಬ್ರಿಜೇಶ್ ಚೌಟ ಪತ್ರದಲ್ಲಿ ತಿಳಿಸಿದ್ದಾರೆ.

















