ವಿಕಲಚೇತನರಿಗೆ ಅನುಕಂಪವಲ್ಲ, ಸ್ವಾಭಿಮಾನದಿಂದ ಬದುಕುವ ಅವಕಾಶ ನೀಡಿ: ಶರ್ಮಿಳಾ ಎಸ್

ಉಡುಪಿ: ವಿಕಲಚೇತನರ ಸಾಧನೆಗಳಿಗೆ ಸಮಾಜವು ಪ್ರೋತ್ಸಾಹ ನೀಡಬೇಕು. ಅವರನ್ನು ಅನುಕಂಪದಿಂದ ಕಾಣುವುದಕ್ಕಿಂತ ಸ್ವಾಭಿಮಾನದಿಂದ ಬದುಕುವ ಹಕ್ಕು ಮತ್ತು ಅವಕಾಶವನ್ನು ನೀಡಬೇಕು. ಅವರಿಗೆ ಅವಮಾನ ಮಾಡುವುದು, ವಂಚಿಸುವುದು ಅವರ ಸಾಧನಗಳನ್ನು ಹಾಳುಗೆಡುವುದು ಜಾಮೀನುರಹಿತ ಅಪರಾಧವಾಗಿದ್ದು, 6 ತಿಂಗಳಿಂದ 6 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದ್ದು, ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ ಎಸ್ ಹೇಳಿದರು.

ಅವರು ಶನಿವಾರ ನಗರದ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ(ರಿ), ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ
ಸಂಸ್ಥೆಗಳು, ವಿಕಲಚೇತನರ ಸಂಘಟನೆಗಳು ಮತ್ತು ಪಾಲಕರ ಸಂಘಟನೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ವಿಕಲಚೇತನರು ಬಳಸುವ ಸಾಧನ, ಸಲಕರಣೆಗಳನ್ನು ನೀಡಲು ಮತ್ತು ಸರಕಾರದ ಸವಲತ್ತುಗಳನ್ನು ವ್ಯವಸ್ಥಿತವಾಗಿ ವಿಕಲಚೇತನರಿಗೆ ದೊರಕಿಸುವ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿದ್ದು, 3 ಸಾವಿರ ಮಂದಿ ವಿಕಲಚೇತನರು ಸಮೀಕ್ಷೆಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು.

ಜಿಲ್ಲೆಯಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಗ್ರಾಮಮಟ್ಟದಲ್ಲಿ ವಿ.ಆರ್.ಡಬ್ಲ್ಯೂ ಅವರ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಿಕಲಚೇತನರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನವನ್ನು ವ್ಯವಸ್ಥಿತವಾಗಿ ಸದ್ಬಳಕೆ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಶೇಷ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷೆ ಅಗ್ನೇಸ್ ಕುಂದರ್, ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ಜಿಲ್ಲಾ ರೆಡ್‌ಕ್ರಾಸ್ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ, ವಿಕಲಚೇತನರ ಪಾಲಕರ ಸಂಘದ ಅಧ್ಯಕ್ಷ ಜೈ ವಿಠಲ್, ತಾಲೂಕು ಆರೋಗ್ಯಾಧಿಕಾರಿ ಡಾ| ವಾಸುದೇವ ಉಪಾದ್ಯಾಯ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರತ್ನಾ ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವೀಣಾ ವಿವೇಕಾನಂದ ಸ್ವಾಗತಿಸಿ, ಪ್ರಸ್ತಾವನೆಗೈದರು. ವಾಗ್ಜೋತಿ ವಸತಿ ಶಾಲೆಯ ಪ್ರಾಂಶುಪಾಲ ರವೀಂದ್ರ ಹೆಚ್. ನಿರೂಪಿಸಿದರು.

ಆರೋಗ್ಯ ಇಲಾಖೆ ವತಿಯಿಂದ ರಕ್ತದೊತ್ತಡ, ಮಧುಮೇಹ ತಪಾಸಣೆ ಮತ್ತು ಆಭಾ ಕಾರ್ಡ್ಗಳ ನೊಂದಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡೆಫ್ಟ್ ವರ್ಲ್ಡ್ ಕಪ್ 2022 ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕ್ರಿಕೆಟರ್ ಪೃಥ್ವಿರಾಜ ಶೆಟ್ಟಿ ಹಂಚಾನಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿಶೇಷ ಶಾಲೆ ಮಕ್ಕಳಿಗೆ ಬಹುಮಾನ ವಿತರಣೆ, ನೇತ್ರಹೀನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್ ಮತ್ತು ಬಳಗದವರಿಂದ ಅಂಗವೈಕಲ್ಯತೆಗೆ ಕಾರಣ, ಅರಿವು ನೀಡುವ ಯಕ್ಷಗಾನ ಪ್ರದರ್ಶನ ಮತ್ತು ವಿಶೇಷ ಶಾಲೆ ಮಕ್ಕಳು ಸಿದ್ಧಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ, ಜಾಥಾ ಕಾರ್ಯಕ್ರಮ ನಡೆಯಿತು.