ಶಿಕ್ಷಣದಿಂದ ಹೆಣ್ಣು ಮಕ್ಕಳು ಸಾಧನೆ ಮಾಡಲು ಸಾಧ್ಯ: ಮಮ್ತಾಜ್‌

ಕೋಟ: ಇಂದು ಬ್ಯಾರಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಬ್ಯಾರಿ ಹೆಣ್ಣು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇದೆ. ಅದನ್ನು ಪೋಷಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ನಮ್ಮಾಂದಿಗೆ ಇತರರನ್ನು ಕರೆದುಕೊಂಡು ಹೋಗುವುದೇ ನಿಜವಾದ ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲೆಯ ಸಹಾಯಕ ಅಭಿಯೋಗ ನಿರ್ದೇಶಕ ಮಮ್ತಾಜ್ ಹೇಳಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೋಟ ಡಾ.ಕಾರಂತ ಪ್ರತಿಷ್ಠಾನದ ಸಹಕಾರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ಶನಿವಾರ ಆಯೋಜಿಸಲಾದ ಅಕಾಡೆಮಿಯ ಪ್ರಥಮ ಅವಧಿಯ ಸದಸ್ಯರಾಗಿದ್ದ ಡಾ.ಪಿ.ಸುಶೀಲ ಉಪಾಧ್ಯಾಯರವರ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ, ಸುಶೀಲ ಉಪಾಧ್ಯಾಯರವರ ಸಂಸ್ಮರಣ ಕುರಿತು ವಿಶೇಷ ಉಪನ್ಯಾಸ ನೀಡಿ, ಸುಶೀಲಾ ಉಪಾಧ್ಯಾಯರು ಮಹಾ ಮಾನವತವಾದಿ. ಸಾಧಕರಿಗೆ ಜಾತಿ, ಲಿಂಗ, ಭಾಷೆ, ಬಣ್ಣ ಯಾವುದು ಕೂಡ ಅಡೆ ತಡೆಯಲು ಆಗುವು ದಿಲ್ಲ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾನತೆಯ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್, ಪ್ರತಿ ಷ್ಠಾನದ ಟ್ರಸ್ಟಿ ಇಬ್ರಾಹಿಂ ಕೋಟ, ಕಾರ್ಯದರ್ಶಿ ನರೇಂದ್ರ ಕೋಟ, ಕರ್ನಾಟಕ ಹಜ್ ಸಮಿತಿ ಮಾಜಿ ಸದಸ್ಯ ಸಲೀಂ ಅಂಬಾಗಿಲು, ಕೋಟತಟ್ಟು ಗ್ರಾಪಂ ನೋಡೆಲ್ ಅಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಸದಸ್ಯ ಶೇಖ್ ಆಸೀಫ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ಮಮ್ತಾಝ್, ಡಾ.ವಾರಿಜ ಎನ್., ಸುಶೀಲ ಸೋಮಶೇಖರ್, ಡಾ.ಫಿರ್ದೋಸ್, ಡಾ.ಅಪ್ಸರಿ ಬಾನು ಎಂ., ಮೀನಾ ಪಿಂಟೊ ಕಲ್ಯಾಣಪುರ, ಫರ್ಝಾನ ಎಂ., ಲಲಿತಾ ಪೂಜಾರಿ ಕೊರವಡಿ, ಸುಜಾತಾ ಅಂದ್ರಾದೆ, ಶೈಲಾ ಎಸ್.ಪೂಜಾರಿ, ಮಂಜುಶ್ರೀ ರಾಕೇಶ್ ಕಟಪಾಡಿ ಅವರನ್ನು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸನ್ಮಾನಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತ ನಾಡಿದರು. ಅಕಾಡೆಮಿ ಸದಸ್ಯ ನಝೀರ್ ಪೊಲ್ಯ ವಂದಿಸಿದರು. ಅಕಾಡೆಮಿ ಸದಸ್ಯರಾದ ಚಂಚಲಾಕ್ಷಿ, ಶಂಶೀರ್ ಬುಡೋಳಿ, ಸುರೇಖಾ ಉಪಸ್ಥಿತರಿದ್ದರು.

ಅನುಷಾ ಕಾರ್ಯಕ್ರಮ ನಿರೂಪಿಸಿದರು.ಮಹಿಳೆಯರಿಗಾಗಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಮೆಹಂದಿ ಸ್ಪರ್ಧೆ ಮತ್ತು ಸಂಗೀತ ಕುರ್ಚಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಳಿಕ ಸಾಬರಕಟ್ಟೆ ಅಕ್ಷರ ಪ್ರತಿಷ್ಠಾನ ತಂಡದಿಂದ ಸಾಂಸ್ಕೃತಿಕ ಸಿಂಚನ ಕಾರ್ಯ ಕ್ರಮ ನಡೆಯಿತು