ಕರ್ನಾಟಕದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಜರ್ಮನಿ ಫೆವರೇಟ್ ದೇಶವಂತೆ! ಸಮೀಕ್ಷೆ ಬಿಚ್ಚಿಟ್ಟ ಸತ್ಯ

ಬೆಂಗಳೂರು: ಉನ್ನತ ಶಿಕ್ಷಣ ಮತ್ತು ವೃತ್ತಿ ಅವಕಾಶಗಳಿಗಾಗಿ ಭಾರತೀಯ ವಿದ್ಯಾರ್ಥಿಗಳ ಪ್ರಮುಖ ಆಯ್ಕೆಯಾಗಿ ಜರ್ಮನಿ ಹೊರಹೊಮ್ಮುತ್ತಿದೆ ಎಂಬ ಮಹತ್ವದ ಅಂಶ ಟೆರಾಟೆರ್ನ್ ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ. ಮಾರ್ಚ್ 2026ರಲ್ಲಿ ನಡೆದ ಈ ಸಮೀಕ್ಷೆಯ ಪ್ರಕಾರ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಜರ್ಮನಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಮೈಸೂರು ಹೊರತುಪಡಿಸಿ ಬೆಂಗಳೂರು, ಮಂಗಳೂರು, ಕಲಬುರಗಿ, ಉಡುಪಿ, ಶಿವಮೊಗ್ಗ ಹಾಗೂ ದಾವಣಗೆರೆಯ ವಿದ್ಯಾರ್ಥಿಗಳು ಜರ್ಮನಿಯಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಪಡೆಯುತ್ತಿರುವುದು ಗಮನಾರ್ಹವಾಗಿದೆ. ಈಗಾಗಲೇ 600 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಜರ್ಮನಿಗೆ ತೆರಳಿದ್ದು, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸುತ್ತಿರುವ ರಾಜ್ಯಗಳಾಗಿ ಗುರುತಿಸಿಕೊಂಡಿವೆ.

ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ (AI), ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಹಾಗೂ ವೈದ್ಯಕೀಯ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಪದವಿ ಪೂರ್ಣಗೊಳಿಸಿದ ಅನೇಕ ವಿದ್ಯಾರ್ಥಿಗಳು ಐಟಿ, ಆಟೋಮೋಟಿವ್ ಎಂಜಿನಿಯರಿಂಗ್, ಆರೋಗ್ಯ ರಕ್ಷಣೆ, ಹಣಕಾಸು ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ವೃತ್ತಿಪರರಿಗೆ ಜರ್ಮನಿಯಲ್ಲಿ ಬೇಡಿಕೆ ಹೆಚ್ಚುತ್ತಿರುವುದು ವಿದ್ಯಾರ್ಥಿಗಳ ಆಸಕ್ತಿಗೆ ಮತ್ತಷ್ಟು ಉತ್ತೇಜನ ನೀಡುತ್ತಿದೆ.

ಜರ್ಮನಿಯ ಬೋಧನಾ ಶುಲ್ಕವಿಲ್ಲದ ಸಾರ್ವಜನಿಕ ವಿಶ್ವವಿದ್ಯಾಲಯಗಳು, ಇತರ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಜೀವನ ವೆಚ್ಚ ಹಾಗೂ 18 ತಿಂಗಳ ಅಧ್ಯಯನಾನಂತರದ ಕೆಲಸದ ವೀಸಾ ವ್ಯವಸ್ಥೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಮುಖ ಕಾರಣಗಳಾಗಿವೆ. ಪರಿಣಾಮವಾಗಿ, ಭಾರತೀಯ ವಿದ್ಯಾರ್ಥಿಗಳು ಉತ್ತಮ ಉದ್ಯೋಗಾವಕಾಶ ಮತ್ತು ದೀರ್ಘಾವಧಿಯ ವಲಸೆ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಜರ್ಮನಿಯನ್ನು ಆದ್ಯತೆಯ ತಾಣವಾಗಿ ಪರಿಗಣಿಸುತ್ತಿದ್ದಾರೆ.