ಗಂಗೊಳ್ಳಿಯಿಂದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗನ ಸನ್ನಿಧಿಗೆ ಹಿಂ.ಜಾ.ವೇ ಕಾರ್ಯಕರ್ತರ ಪಾದಯಾತ್ರೆ 

ಕುಂದಾಪುರ: ಲೋಕಕಲ್ಯಾಣಾರ್ಥವಾಗಿ ಹಿಂದೂಜಾಗರಣ ವೇದಿಕೆ ಗಂಗೊಳ್ಳಿಯ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಗಂಗೊಳ್ಳಿಯಿಂದ ಸುಮಾರು 26 ಕಿಲೋಮೀಟರ್ ದೂರವಿರುವ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯವರೆಗೂ ಪಾದಯಾತ್ರೆ ನಡೆಸಿದರು.

ಕರಾವಳಿ ಭಾಗದ ಮತ್ಸ್ಯ ಕ್ಷ್ಯಾಮ ನಿವಾರಣೆಯಾಗಿ ಮತ್ಸ್ಯ ಸಂಪತ್ತು ಸಮೃದ್ಧಿಯಾಗಲಿ, ಪಾಕೃತಿಕ ವಿಕೋಪ ಕಡಿಮೆಯಾಗಲಿ, ಮೀನುಗಾರಿಕೆ ತೆರಳಿದ ಮೀನುಗಾರರು ಸುರಕ್ಷಿತರಾಗಿರಲಿ, ಗೋ ಸಂತತಿ ರಕ್ಷಣೆಗಾಗಿ, ಹಾಗೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಈ ಪಾದಯಾತ್ರೆ ನಡೆಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಮುಂಜಾನೆ ಗಂಗೊಳ್ಳಿ ವಿರೇಶ್ವರ ದೇವಸ್ಥಾನದಿಂದ ಆರಂಭಿಸಿದ ಪಾದಯಾತ್ರೆಯು ಮುಳ್ಳಿಕಟ್ಟೆ-ಹೆಮ್ಮಾಡಿ ಮೂಲಕ ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಸಾಗಿತು. ಕಾರ್ಯಕರ್ತರಿಗೆ ಜಿ.ಪಂ ಸದಸ್ಯೆ ಶೋಭಾ ಜಿ. ಪುತ್ರನ್ ಅವರ ನಿವಾಸದ ಬಳಿ ಪಾನೀಯ ಹಾಗೂ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರ ನಿವಾಸದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಘೊಂಡಿದ್ದು ಬ್ರಹ್ಮಲಿಂಗನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಲ್ಲಿನ ಪ್ರಸಾದವನ್ನು ಗಂಗೊಳ್ಳಿಗೆ ತಂದು ಸಮುದ್ರ ರಾಜನಿಗೆ ಅರ್ಪಣೆ ಮಾಡಿ ಪಾರ್ಥನೆಗೈದರು.

ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ಉಪಾಧ್ಯಕ್ಷ ವಾಸು ದೇವಾಡಿಗ, ಗಂಗೊಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿ ಯಶವಂತ ಗಂಗೊಳ್ಳಿ, ಬೈಂದೂರು ತಾಲೂಕು ಕಾರ್ಯಕಾರಿಣಿ ರತ್ನಾಕರ  ಇದ್ದರು.