ಗಂಗೊಳ್ಳಿ: ಹಸಿಮೀನು ವ್ಯಾಪಾರಸ್ಥರ ಸಂಘದ ದಶಮಾನೋತ್ಸವ

ಕುಂದಾಪುರ: ಜೀವನದಲ್ಲಿ ಪ್ರತಿಯೊಬ್ಬರು ಸೌಂದರ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸೌಂದರ್ಯ ಪ್ರಜ್ಞೆ ಬೆಳೆದರೆ ಈ ದೇಶದ ಪ್ರತಿಯೊಂದು ಕಲಾಪ್ರಕಾರಗಳನ್ನು ಆಸ್ವಾದಿಸಬಹುದು. ಸೌಂದರ್ಯ ಪ್ರಜ್ಞೆ ಇಲ್ಲದಿದ್ದರೆ ನಮ್ಮ ಜೀವನ ಬರಡಾಗುತ್ತದೆ. ಜನ ಸೃಜನಶೀಲ ಮನಸ್ಸುಗಳನ್ನು ಹೊಂದಿದಾಗ ಊರು ಎಲ್ಲಾ ಆಯಾಮಗಳಲ್ಲಿ ಬೆಳೆಯುತ್ತದೆ. ಉತ್ತಮ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸಂಘ ಸಂಸ್ಥೆಗಳು ಊರಿನಲ್ಲಿನ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಡಾ.ಮೋಹನ ಆಳ್ವ ಹೇಳಿದರು.

ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ದಶಮಾನೋತ್ಸವದ ಅಂಗವಾಗಿ ಗಂಗೊಳ್ಳಿ ಮೀನುಗಾರಿಕಾ ಬಂದರು ವಠಾರದಲ್ಲಿ ಸೋಮವಾರ ಜರಗಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಗೌರವಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ನಾಗ ಖಾರ್ವಿ, ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ ಕುಂದರ್, ಗಂಗೊಳ್ಳಿ ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಶುಭಾಶಂಸನೆಗೈದರು.

ಇದೇ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆನಂದ ಸಿ.ಕುಂದರ್ ಅವರನ್ನು ಸನ್ಮಾನಿಸಲಾಯಿತು ಮತ್ತು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಡಾ.ಮೋಹನ ಆಳ್ವ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ವಿಕೇಶ್ ಮೊಗವೀರ, ದರ್ಶನ್, ಗೌತಮಿ, ಅಕ್ಷತಾ, ಆದಿತ್ಯ ಮತ್ತು ರೋಷನ್ ಅವರನ್ನು ಅಭಿನಂದಿಸಲಾಯಿತು.

ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಕೊಂಕಣಿ ಖಾರ್ವಿ ಮಾರ್ಕೇಟಿಂಗ್ ಸಮಿತಿ ಅಧ್ಯಕ್ಷ ಸೌಪರ್ಣಿಕ ಬಸವ ಖಾರ್ವಿ, ಗಂಗೊಳ್ಳಿ ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಪುರುಷೋತ್ತಮ ಆರ್ಕಾಟಿ ಮತ್ತಿತರರು ಉಪಸ್ಥಿತರಿದ್ದರು.

ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೋಹನ ಪಿ.ಖಾರ್ವಿ ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಮತ್ತು ಸುಂದರ ಜಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಿತು.