ಗಂಗೊಳ್ಳಿ: ಶ್ರೀ ಮಾತಾ ಚಕ್ರೇಶ್ವರಿ ದೇವಸ್ಥಾನದ 51 ಮಂದಿ ಭಕ್ತಾದಿಗಳು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಪಾದಯಾತ್ರೆ

ಗಂಗೊಳ್ಳಿ: ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ಶ್ರೀ ಮಾತಾ ಚಕ್ರೇಶ್ವರಿ ದೇವಸ್ಥಾನದ 51 ಮಂದಿ ಭಕ್ತಾದಿಗಳು ಗಂಗೊಳ್ಳಿಯ ಶ್ರೀ ಸಂಪಿಗೆ ಜಟ್ಟಿಗೇಶ್ವರ ದೇವರ ಸನ್ನಿಧಿಯಿಂದ ಸತತ 11ನೇ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಶ್ರೀ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಂದ್ರ ಖಾರ್ವಿ ಗಂಗೊಳ್ಳಿ ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನಕ್ಕೆ ಪಾದಯಾತ್ರೆ ಆರಂಭಿಸಿದರು. ಸಮಾಜದ ಉನ್ನತಿಗಾಗಿ, ಗ್ರಾಮದ ಶ್ರೇಯೋಭಿವೃದ್ಧಿ, ಕರೋನಾ ವೈರಸ್ ನಿರ್ಮೂಲನೆ, ಮತ್ಸ್ಯಕ್ಷಾಮ ನಿವಾರಣೆಗಾಗಿ ಪ್ರಾರ್ಥಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವುದರ ಜೊತೆಗೆ ಪಾದಯಾತ್ರೆಯಲ್ಲಿ ‘ಆತ್ಮನಿರ್ಭರ ಭಾರತ್’ ಎನ್ನುವ ಅಭಿಯಾನವನ್ನು ಹಮ್ಮಿಕೊಂಡು ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಹಾಗೂ ಸ್ವದೇಶಿ ವಸ್ತುಗಳನ್ನು ಪ್ರೋತ್ಸಾಹಿಸಿ ದೇಶದ ಅಭಿವೃದ್ಧಿಗೆ ಸಹಕರಿಸಿ ಎನ್ನುವ ಸಂದೇಶವನ್ನು ಪಾದಯಾತ್ರಿಗಳು ದಾರಿಯುದ್ದಕ್ಕೂ ಸಾರುವ ಉದ್ದೇಶ ಹೊಂದಿದ್ದಾರೆ.