ನವದೆಹಲಿ: ದಕ್ಷಿಣ ದೆಹಲಿಯ ಪ್ರಸಿದ್ಧ ಕಲ್ಕಾಜಿ ಮಂದಿರದ ಸಮೀಪದ ಉದ್ಯಾನವನದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಪೊಲೀಸರೆಂದು ಪರಿಚಯಿಸಿಕೊಂಡು ಬಾಲಕಿ ಹಾಗೂ ಆಕೆಯ ಸ್ನೇಹಿತನಿಗೆ ಬೆದರಿಕೆ ಹಾಕಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಸೋಮವಾರ ಸಂಜೆ ನಡೆದಿದೆ ಎನ್ನಲಾಗಿದ್ದು, ಬಾಲಕಿ ತನ್ನ 17 ವರ್ಷದ ಸ್ನೇಹಿತನೊಂದಿಗೆ ಸಂಜೆ ಸುಮಾರು 7 ಗಂಟೆಗೆ ಕಲ್ಕಾಜಿ ಮಂದಿರಕ್ಕೆ ತೆರಳಿದ್ದಳು. ದರ್ಶನ ಮುಗಿಸಿದ ಬಳಿಕ ಸುಮಾರು 7.30ರ ವೇಳೆಗೆ ಇಬ್ಬರೂ ದೇವಾಲಯದ ಸಮೀಪದ ಉದ್ಯಾನವನಕ್ಕೆ ತೆರಳಿದ್ದರು.
ಈ ವೇಳೆ 25ರಿಂದ 30 ವರ್ಷ ವಯಸ್ಸಿನ ಮೂವರು ಅಪರಿಚಿತರು ಅವರ ಬಳಿಗೆ ಬಂದು ತಾವು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಬಾಲಕಿ ಹಾಗೂ ಆಕೆಯ ಸ್ನೇಹಿತನಿಗೆ ಬೆದರಿಕೆ ಹಾಕಿ, ಬಾಲಕಿಯನ್ನು ಪ್ರತ್ಯೇಕವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಪೈಕಿ ಓರ್ವ ಬಂದೂಕು ಹಾಗೂ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಉಳಿದ ಇಬ್ಬರು ಆರೋಪಿಗಳೂ ದೌರ್ಜನ್ಯ ಎಸಗಿದ್ದು, ಘಟನೆ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಬೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಮರ್ ಕಾಲೋನಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕೆಯ ಹೇಳಿಕೆ ಆಧರಿಸಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಗುಂಡಿನ ದಾಳಿ ನಡೆಸಿದ ಬಳಿಕ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.















