ಇವರ ಬಣ್ಣದ ಲೋಕ ಜಗಮಗ, ಇವರೇ ಕಲಾಪ್ರಪಂಚದ ಯುವ ಪಯಣಿಗ:ಬಣ್ಣದ ರಂಗಿನ ಹುಡುಗ “ಆಕಾಂಕ್ಷ್”

ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ  7ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಉಡುಪಿಯ ಬೈಲೂರಿನ ಕಲಾಜಗತ್ತಿನ  ಯುವ ಪಯಣಿಗ ಆಕಾಂಕ್ಷ್ ಅವರ ಕತೆ.

ಮನೆಯೇ ಸಣ್ಣ ರಂಗಕೇಂದ್ರವಾಗಿದ್ದಾಗ ಕಲೆಯಲ್ಲಿನ ಆಸಕ್ತಿ, ಸಣ್ಣ ಪುಟ್ಟ ತಿಳುವಳಿಕೆ, ಕಲಿಕೆ ಆಗುವುದು ಸಹಜ ಎನ್ನಬಹುದು. ಆದರೆ ಅದನ್ನು ಉಳಿಸಿ, ಬೆಳೆಸಿ, ಮತ್ತಷ್ಟು ಹೊಸ ಕಲಿಕೆ, ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವುದು ಆಯಾ ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ವೈಯಕ್ತಿಕ ಇಚ್ಛೆಯ ಅನುಸಾರ ಹೆಚ್ಚಿನ ಬೆಳವಣಿಗೆ ಆಗುತ್ತದೆ. ಹೀಗೆ ಮನೆಯ ಹಿನ್ನೆಲೆಯಲ್ಲಿ ಮತ್ತಷ್ಟು ಹೊಸದಾಗಿ, ಗಟ್ಟಿಯಾಗಿ  ಅರಳುತ್ತಿರುವ ಕಲಾಪ್ರತಿಭೆ ಆಕಾಂಕ್ಷ್ ಜೆ.ಬಿ.

ಉಡುಪಿಯ ಬೈಲೂರಿನ ಇವರಿಗೆ ಮನೆಯೇ ಮೊದಲ ಕಲಾಪ್ರಪಂಚ. ಪಾಠಶಾಲೆ ಎಲ್ಲವೂ. ತಂದೆಯೇ ಸ್ಪೂರ್ತಿ. ಈ ಆಧಾರದಲ್ಲಿ ಸಾಧನೆಯ ಹಾದಿ ಹಿಡಿದು ನಡೆಯುತ್ತಿರುವ ಆಕಾಂಕ್ಷ್ ಚಿತ್ರಕಲೆ, ಕರಕುಶಲ ಕಲೆ, ಯಕ್ಷಗಾನ, ತಬಲಾ, ಪ್ರಸಾಧನ ಕಲೆ, ಕ್ರೀಡೆ, ಅಲ್ಲದೆ ನಾಲ್ಕಾರು ಬಗೆಯ ರಿದಮ್ ವಾದನ ನುಡಿಸಲು ಬಲ್ಲವರು!

ಎಂಜಿಎಂ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಯಾಗಿ, ಮುಂದೆ ಫ್ಯಾಷನ್ ಡಿಸೈನಿಂಗ್ ಕಲಿಯಬೇಕೆಂದಿರುವ ಇವರ ಕತೆ ಹೇಳ್ತೇನೆ ಕೇಳಿ.

“ಇಂತಹದನ್ನೇ ಕಲಿಯಬೇಕು ಎಂದು ಗಾಢವಾಗಿ ಅನಿಸುವ ಮೊದಲೇ ಒಂದಷ್ಟು ಕಲಿಕೆ ನನಗೆ ತಿಳಿಯದೇ ಆಗಿಹೋಗಿತ್ತು. ತಂದೆ, ಮನೆಯ ವಾತಾವರಣ ಹಾಗೆಯೇ ಇತ್ತು” ಎಂದು ಆರಂಭದ ಬಗ್ಗೆ ಹೇಳುವ ಅವರ ಮುಂದಿನ ಮಾತುಗಳಲ್ಲಿ ಕಲಿಕೆಯ ತುಡಿತವಿದೆ.

ನಮಗೆ ತಿಳಿದದ್ದನ್ನು ಹಂಚಿಕೊಳ್ಳುವುದು :

“ನನ್ನ ಈ ಬೆಳವಣಿಗೆಗೆ ನಮ್ಮಲ್ಲಿನ ಸ್ಪರ್ಧಾತ್ಮಕತೆಯೇ ಸ್ಪೂರ್ತಿ. ಕಲಾಪ್ರಪಂಚವನ್ನು ಗಮನಿಸಿದರೆ ಇಲ್ಲಿ ನಾನೇನೂ ಅಲ್ಲ. ಎಷ್ಟೋ ದೊಡ್ಡ ಕಲಾವಿದರು, ದೈತ್ಯ ಪ್ರತಿಭೆಗಳು ಇದ್ದಾರೆ. ಅವರಷ್ಟು ನಾನಲ್ಲ. ಆದರೆ ಅವರಂತೆ ಆಗಬೇಕು, ಅಷ್ಟು ಪ್ರಯತ್ನ ಬೇಕು ಎನ್ನುವ ಭಾವವೇ ನನ್ನನ್ನು ಹೆಚ್ಚು ಕಲಿಯುವಂತೆ, ಬೆಳೆಯುವಂತೆ ಮಾಡುತ್ತಿದೆ. ತಿಳಿದವರಿಂದ ಕಲಿಯಲು ನಾನು ಆಸೆ ಪಡುತ್ತೇನೆ. ಕೇಳಿ, ನೋಡಿ, ಗಮನಿಸಿ ಕಲಿಯುತ್ತೇನೆ. ನನ್ನಲ್ಲಿ ಯಾರಾದರು ಏನಾದರು ಕೇಳಿದರೆ, ಗೊತ್ತಿದ್ದಷ್ಟು ತಿಳಿಸಿಕೊಡಲೂ ನಾನು ಯೋಚಿಸುವುದಿಲ್ಲ. ಈ ಗುಣವೇ ಬಹುಶಃ ಕಲೆಯ ಮೇಲಿನ ನನ್ನ ಆಸಕ್ತಿ ಉಳಿಯುವಂತೆ ಮಾಡಿದೆ” ಎಂದು ಹೇಳುತ್ತಾರೆ ಆಕಾಂಕ್ಷ್

ಕಲೆಯ ಕಲಿಕೆಯ ಆಗರ :

ಆಕಾಂಕ್ಷ್ ಏನೇನು ಬಲ್ಲರು? ಕಲಾಪ್ರಪಂಚದಲ್ಲಿ ಅವರ ಇಷ್ಟ ಏನು? ಇದನ್ನು ಹೇಳುತ್ತಾ ಹೋದರೆ ನಿಮಗೆ ಆಶ್ಚರ್ಯ ಆಗಬಹುದು.

ಹೌದು. ತಂದೆ ಜಯಕರ ಬೈಲೂರು ತೆಂಕುತಿಟ್ಟು ಯಕ್ಷಗಾನ ಕಲಾವಿದ ಮತ್ತು ಗುರು. ಈ ಕಾರಣದಿಂದ ತನ್ನ ಐದನೇ ವರ್ಷಕ್ಕೇ ಯಕ್ಷಗಾನದ ಗೆಜ್ಜೆ ಕಟ್ಟಿದ ಆಕಾಂಕ್ಷ್, ಇಂದಿಗೂ ಮುಂದಿಗೂ ಅದನ್ನು ಬಿಡುವುದಿಲ್ಲ ಎನ್ನುತ್ತಾರೆ.

ಸಂಗೀತದ ಕಡೆಗೆ ಬಂದರೆ, ಮಾಧವ ಆಚಾರ್ಯರ ಶಿಷ್ಯನಾಗಿ ತಬಲಾ ಕಲಿತಿದ್ದಾರೆ. ತಬಲಾ ಜೂನಿಯರ್ ಪರೀಕ್ಷೆ ಪೂರೈಸಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. “ಹತ್ತನೇ ತರಗತಿಯ ಪರೀಕ್ಷೆಯ ಕಾರಣಕ್ಕೆ ತಬಲಾ ಕಲಿಕೆ ನಿಲ್ಲಿಸಿದೆ ಮುಂದೆ ಶಾಸ್ತ್ರೀಯವಾಗಿ ಕಲಿಯಲು ಆಗಲಿಲ್ಲ. ಹಾಗೆಂದು ತಬಲಾ ವಾದನದಲ್ಲಿ ಈಗಲೂ ಆಸಕ್ತಿ ಇದೆ. ಭಜನಾ ಕಾರ್ಯಕ್ರಮಗಳಿಗೆ ತಬಲಾ ನುಡಿಸುತ್ತೇನೆ” ಎನ್ನುತ್ತಾರೆ.

ತಬಲಾ ಹೊರತುಪಡಿಸಿ ಕೆಲವಾರು ಸಂಗೀತದ ರಿದಮ್ ಪರಿಕರಗಳನ್ನು ನುಡಿಸಲು ತಿಳಿದಿದ್ದಾರೆ. ಚೆಂಡೆ, ಡೋಲಕ್, ಜುಂಬೆ, ಡ್ರಮ್ಸ್, ಕೊಂಗೊಗಳು ಆಕಾಂಕ್ಷ್ ಕೈಯಲ್ಲಿ ನುಡಿಸಲ್ಪಡುತ್ತವೆ.

ರಂಗಕಲೆಯ ವಿಭಾಗದಲ್ಲಿ ನಾಟಕದ ನಟನೆ, ಸಂಗೀತ ಜೊತೆಗೆ ಸೆಟ್ ಕೆಲಸಗಳನ್ನೂ ಮಾಡಬಲ್ಲರು. ಯಕ್ಷಗಾನ ತಿಳಿದಿರುವುದರಿಂದ ನೃತ್ಯವನ್ನು ಅಳವಡಿಸಿಕೊಳ್ಳಲೂ ಕಷ್ಟವಾಗುದಿಲ್ಲ. ಹಾಗಾಗಿ ಡ್ಯಾನ್ಸ್ ಟೀಂಗಳಿಗೂ ಆಕಾಂಕ್ಷ್ ಬೇಕು. ಇದಲ್ಲದೇ ಪ್ರಸಾಧನ ಕಲೆಯಲ್ಲೂ ಪರಿಣತಿ ಹೊಂದಿದ್ದಾರೆ. ನಾಟಕ, ಯಕ್ಷಗಾನ, ಭರತನಾಟ್ಯ, ಡ್ಯಾನ್ಸ್ ಗಳಿಗೆ ಮೇಕಪ್ ಆರ್ಟಿಸ್ಟ್ ಕೆಲಸವನ್ನೂ ಮಾಡಿದ್ದಾರೆ.

ಕ್ರೀಡೆಯಲ್ಲೂ ಮುಂದಿರುವ ಇವರು ಪದವಿ ಕಾಲೇಜಿನಲ್ಲಿ ವಾಲಿಬಾಲ್, ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಟಗಳನ್ನು ಯುನಿವರ್ಸಿಟಿ ಲೆವೆಲ್ ನಲ್ಲಿ ಆಡಿದ್ದಾರೆ.

“ವಿಶ್ವವಿದ್ಯಾನಿಲಯದ ಫೈನ್ ಆರ್ಟ್ಸ್ ಸ್ಪರ್ಧೆಯಲ್ಲಿ, ಸ್ಪಾಟ್ ಪೈಂಟಿಂಗ್ ಮತ್ತು ನಾಟಕ ತಂಡದಲ್ಲಿ ಭಾಗವಹಿಸಿದ್ದೆ. ಸ್ಪಾಟ್ ಪೈಂಟಿಂಗ್ ನಲ್ಲಿ ಸೌತ್ ಝೋನ್ ವರೆಗೆ ಹೋದೆ‌.‌ ನಾಟಕ ತಂಡ ಸೌತ್ ಝೋನ್ ನಲ್ಲಿ ಆಯ್ಕೆಯಾಗಿ ರಾಷ್ಟ್ರ ಮಟ್ಟದವರೆಗೆ ಹೋಯಿತು. ಅಲ್ಲೂ ಜಯಗಳಿಸಿದೆವು. ಉಳಿದಂತೆ ಎಲ್ಲದರಲ್ಲೂ ಸಣ್ಣ ಪುಟ್ಟ ಸಾಧನೆ ಅಷ್ಟೆ. ಸಾಧಿಸಬೇಕಾದ್ದು ಬಹಳಷ್ಟಿದೆ” ಎನ್ನುವ ಆಕಾಂಕ್ಷ್ ಗೆ ಶುಭ ಹಾರೈಸೋಣ‌.
ಆಕಾಂಕ್ಷ್ ಜೆ.ಬಿ. : 8722025050

ಬರಹ: ಗಣಪತಿ ದಿವಾಣ