ಉಡುಪಿ: ಆರ್ ಎಸ್ಎಸ್ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಇಂಧನ ಸಚಿವ ವಿ.ಸುನಿಲ್ ಕುಮಾರ್ ಉಡುಪಿಯಲ್ಲಿ ಪ್ರತಿಕ್ರಿಯಿಸಿದರು.
ಐಎಎಸ್, ಐಪಿಎಸ್ ಅಧಿಕಾರಿಗಳು ಮಾತ್ರವಲ್ಲ, ಪಿಡಿಒಗಳಿಂದ ಹಿಡಿದು ರಾಷ್ಟ್ರಪತಿಯವರೆಗೂ ಆರ್ಎಸ್ಎಸ್ನವರು ಇದ್ದಾರೆ ಎನ್ನುವ ಮೂಲಕ ಸಚಿವ ಸುನಿಲ್ ಕುಮಾರ್, ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಮಣಿಪಾಲದ ಸಿದ್ಧಿ ವಿನಾಯಕ ದೇವಾಸ್ಥಾನದ ಬಳಿಯ ಸ್ವರ್ಣಾ ನದಿಗೆ ಇಂದು ಬಾಗಿನ ಅರ್ಪಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಆರ್ಎಸ್ಎಸ್ ಹಿನ್ನೆಲೆಯ ನಾಲ್ಕು ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳು ಇದ್ದಾರೆ ಎಂದು ಎಚ್ಡಿಕೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್, ಕುಮಾರಸ್ವಾಮಿಗೆ ಮಾಹಿತಿ ಕೊರತೆ ಇದೆ. ದೇಶದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಆರ್ ಎಸ್ಎಸ್ ಅಧಿಕಾರಿಗಳಿದ್ದಾರೆ ಎಂದು ಟಾಂಗ್ ನೀಡಿದರು.
ಅಪ್ಪ ಮಕ್ಕಳು ಬೇರೆ ಬೇರೆ ಸಂದರ್ಭಗಳಲ್ಲಿ ಆರ್ಎಸ್ಎಸ್ ಸಂಸ್ಥೆಯನ್ನು ಬಳಕೆ ಮಾಡಿಕೊಂಡಿದ್ದಾರೆ. ಖುಷಿ ಬಂದಂತೆ ಬಳಕೆ ಮಾಡಿಕೊಳ್ಳುವ ಸಂಸ್ಥೆ ಆರ್ಎಸ್ಎಸ್ ಅಲ್ಲ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರಕಟ್ಟುವ ಕಾರ್ಯ ಮಾಡುತ್ತಿರುವ ದೇಶದ ಏಕೈಕ ಸಂಸ್ಥೆ ಆರ್ಎಸ್ಎಸ್ ಎಂದರು.