ಉಡುಪಿ: ವಿದ್ಯಾರ್ಥಿ ನಿಲಯಾರ್ಥಿಗಳ ಆರೋಗ್ಯ ಸಂರಕ್ಷಣೆಯ ಉದ್ದೇಶದಿಂದ ಉಚಿತ ಕಣ್ಣಿನ ತಪಾಸಣೆ, ಮಲೇರಿಯಾ ಪರೀಕ್ಷೆ ಹಾಗೂ ವಿವಿಧ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉಡುಪಿಯಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
ನಮ್ಮ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ನಮ್ಮ ಕ್ಲಿನಿಕ್ ಉಡುಪಿ, ಕೆಎಂಸಿ ಮಣಿಪಾಲದ ನೇತ್ರ ವಿಭಾಗ ಹಾಗೂ ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಸಹಯೋಗದಲ್ಲಿ ಶಿಬಿರ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, 76 ಬಡಗಬೆಟ್ಟು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಬೀಡಿನಗುಡ್ಡೆಯ ನಿಲಯಾರ್ಥಿಗಳಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಅಧ್ಯಕ್ಷ ಹೆರಾಲ್ಡ್ ಸೋನ್ಸ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿ ನಿಲಯದ ವಾರ್ಡನ್ ವಿನಾಯಕ್ ಅಧ್ಯಕ್ಷತೆ ವಹಿಸಿದ್ದರು..
ಶಿಬಿರದಲ್ಲಿ ನಿಲಯಾರ್ಥಿಗಳ ಕಣ್ಣಿನ ತಪಾಸಣೆ, ಮಲೇರಿಯಾ ಪರೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ವೈದ್ಯಕೀಯ ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯ ಪರಿಶೀಲಿಸಿ, ಅಗತ್ಯ ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಶಿಬಿರದ ಸೌಲಭ್ಯವನ್ನು ನಿಲಯಾರ್ಥಿಗಳು ಸದುಪಯೋಗಪಡಿಸಿಕೊಂಡರು. ನಿಲಯಾರ್ಥಿ ಸಿದ್ದು ಸಂಗಮೇಶ ಮೇಟಿ ಸ್ವಾಗತಿಸಿ, ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.















