ಐಕಳ ಕಾಂತಾಬಾರೆ ಬೂದಾಬಾರೆ ಕಂಬಳೋತ್ಸವ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ; ಜಾನುವಾರು ಮೇಳ

ಕಿನ್ನಿಗೋಳಿ: ಐತಿಹಾಸಿಕ ಐಕಳ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳೋತ್ಸವದ ಪ್ರಯುಕ್ತ ವಿವಿಧ ಸಂಘಟನೆಯ ಸಹಕಾರದಲ್ಲಿ ಶ್ರೀನಿವಾಸ್ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಐಕಳ ಬಾವ ಧರ್ಮ ಚಾವಡಿ ಪರಿಸರದಲ್ಲಿ ನಡೆಯಿತು.

ಮೂಡಬಿದ್ರೆ ಶಾಸಕ ಉಮನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸೇವಾ ಸಂಸ್ಥೆಗಳು ಆರೋಗ್ಯ ರಕ್ಷಣೆಗಾಗಿ ಮಾಡುತ್ತಿರುವ ಉಚಿತ ಕಾರ್ಯಕ್ರಮಗಳು ಅಭಿನಂದನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಕಳ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಐಕಳಬಾವ ವಹಿಸಿ ಮಾತನಾಡಿ ಗ್ರಾಮದ 11 ವಿವಿಧ ಸಂಘ ಸಂಸ್ಥೆಗಳು ಸೆರಿ ಉಚಿತ ಆರೋಗ್ಯ ತಪಾಸಣೆ ಹಾಗೂ ಬೃಹತ್ ಜಾನುವಾರು ಮೇಳವನ್ನು ನಡೆಸಲಿದೆ. ಹೈನುಗಾರಿಕೆಯಲ್ಲಿ ತೊಡಗಿರುವವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಗೂ ಯುವಕ ಮತ್ತು ಮಹಿಳೆಯನ್ನು ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಾನುವಾರು ಮೇಳವು ಕಂಬಳ ಗದ್ದೆಯ ಮಂಜೊಟ್ಟಿಯಲ್ಲಿ ನಡೆಯಲಿದ್ದು ಭಾಗವಹಿಸಿದವರಿಗೆ ಬಹುಮಾನ ಇರಲಿದೆ. ಸಾರ್ವಜನಿಕರಿಗಾಗಿ ಕ್ರೀಡೋತ್ಸವ ಕೂಡಾ ನಡೆಯಲಿದೆ ಎಂದರು.

ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ಎಲುಬು ಮತ್ತು ಕೀಲು ವಿಭಾಗದ ಮುಖ್ಯಸ್ಥ ಪ್ರೊ. ಡಾ. ಶಶಿರಾಜ್ ಶೆಟ್ಟಿ , ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಭಾಸ್ಕರ್ ಕೋಟ್ಯಾನ್, ಮೂಲ್ಕಿ ವಲಯ ಪತ್ರಕರ್ತ ಸಂಘದ ಅಧ್ಯಕ್ಷ ನಿಶಾಂತ್‌ ಶೆಟ್ಟಿ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ತ್ಯಾಗರಾಜ್ ಆಚಾರ್ಯ,ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಡಿಸೋಜ, ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ ಹೆಗ್ಡೆ, ಏಳಿಂಜೆ ಶ್ರೀದೇವಿ ಮಹಿಳಾ ಮತ್ತು ಯುವತಿ ಮಂಡಲದ ಅಧ್ಯಕ್ಷೆ ಉಮಾವತಿ, ಕಂಬಳ ಸಮಿತಿಯ ಪದಾಧಿಕಾರಿ ಚಿತ್ತರಂಜನ್ ಭಂಡಾರಿ ಉಪಸ್ಥಿತರಿದ್ದರು.

ಕಂಬಳ ಸಮಿತಿಯ ಸ್ವರಾಜ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ಪಡುಮನೆ ವಂದಿಸಿದರು. ಶ್ರೀಶ ಸರಾಫ್ ಐಕಳ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ ಬೃಹತ್ ಆರೋಗ್ಯ ತಪಾಸಣೆ ನಡೆಯಿತು.