ಮಂಗಳೂರು: ಮಂಗಳೂರಿನ ಮೋರ್ಗನ್ಸ್ ಗೇಟ್ ಸಮೀಪ ಇಂದು ನಡೆದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
ಮತಾಂತರದ ಕಿರುಕುಳಕ್ಕೆ ಇಡೀ ಕುಟುಂಬ ಬಲಿಯಾಗಿದೆ ಎಂಬ ಸ್ಫೋಟಕ ಅಂಶ ಸಾವಿಗೂ ಮುನ್ನ ಮನೆಯ ಮಾಲೀಕ ಬರೆದ ಡೆತ್ನೋಟ್ ನಲ್ಲಿ ಬಹಿರಂಗಗೊಂಡಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ನಾಗೇಶ್ ಶೆರಗುಪ್ಪಿ(30) ಮತ್ತು ಪತ್ನಿ ವಿಜಯಲಕ್ಷ್ಮೀ(26) ಹಾಗೂ ಮಕ್ಕಳಾದ ಸ್ವಪ್ನ(8) ಹಾಗೂ ಸಮರ್ಥ್(4) ಇಂದು ಆತ್ಮಹತ್ಯೆಗೆ ಶರಣಾಗಿದ್ದರು. ಮೊದಲು ಮಕ್ಕಳಿಗೆ ವಿಷ ಉಣಿಸಿ ಬಳಿಕ ತಂದೆ ತಾಯಿ ನೇಣಿಗೆ ಕೊರಳೊಡ್ಡಿದ್ದರು.
ಮಂಗಳೂರಿನ ಮೋರ್ಗನ್ಸ್ ಗೇಟ್ನಲ್ಲಿ ಬಾಡಿಗೆ ಮನೆಯಲ್ಲಿ ಈ ಕುಟುಂಬ ವಾಸವಾಗಿತ್ತು. ನಾಗೇಶ್ ಚಾಲಕನಾಗಿದ್ದ. ವಿಜಯಲಕ್ಷ್ಮೀ ಅಪಾರ್ಟ್ಮೆಂಟ್ವೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದರು. ನಿನ್ನೆ (ಮಂಗಳವಾರ) ರಾತ್ರಿ ಮನೆಗೆ ಫ್ರೈಡ್ ರೈಸ್ ತಂದಿದ್ದ ನಾಗೇಶ್, ಅದರಲ್ಲಿ ವಿಷ ಹಾಕಿ ಪತ್ನಿ-ಮಕ್ಕಳಿಗೆ ತಿನ್ನಿಸಿದ್ದಾನೆ. ಬಳಿಕ ಪತ್ನಿಯನ್ನು ಉಸಿರುಗಟ್ಟಿಸಿ ಮಲಗಿದ್ದಲ್ಲೇ ಕೊಂದಿದ್ದಾನೆ. ಮಕ್ಕಳು ವಿಷಾಹಾರ ತಿಂದು ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ನಾಗೇಶ್ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ನಾಗೇಶ್ರ ಡೆತ್ನೋಟ್ ಪತ್ತೆಯಾಗಿದ್ದು, ಸಾವಿಗೆ ಮತಾಂತರವೇ ಕಾರಣ ಎಂದು ಬರೆಯಲಾಗಿದೆ.
‘ನಮ್ಮ ಸಾವಿಗೆ ನೂರ್ ಜಹಾನ್ ಎಂಬಾಕೆಯೇ ಕಾರಣ. ಆಕೆ ನನ್ನ ಪತ್ನಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಗಲಾಟೆ ಆಗುತ್ತಿತ್ತು. ನಾನು ಎಷ್ಟೇ ಮನವೊಲಿಸಿದರೂ ನನ್ನ ಪತ್ನಿ ವಿಜಯಲಕ್ಷ್ಮೀ ನನ್ನ ಮಾತನ್ನು ಕೇಳುತ್ತಿರಲಿಲ್ಲಿ’ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.