ಉಡುಪಿ: ಅಂತರರಾಜ್ಯ ವಂಚಕರಾದ ‘ಇರಾನಿ ಗ್ಯಾಂಗ್’ ನಾಲ್ಕು ಮಂದಿ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿ, ಇವರಿಂದ ₹ 7 ಲಕ್ಷ ಮೌಲ್ಯದ 65 ಗ್ರಾಂ ತೂಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಶ್ರೀರಾಮಪುರದ ಇರಾನಿ ಮೊಹಲ್ಲಾದ ನಿವಾಸಿ ಜಾಕೀರ್ ಹುಸೇನ್ (26), ಅದೇ ಜಿಲ್ಲೆಯ ಮದರ್ ತೆರೆಸಾ ಸರ್ಕಲ್ ನಿವಾಸಿ ಕಂಬರ್ ರಹೀಂ ಮಿರ್ಜಾ (32), ಅಹ್ಮದ್ ನಗರ ಜಿಲ್ಲೆಯ ಶ್ರೀರಾಮಪುರದ ಸಂಜಯ್ ನಗರದ ಅಕ್ಷಯ್ ಸಂಜಯ್ ಗೋಸಾವಿ (22) ಹಾಗೂ ಅಹ್ಮದ್ ನಗರ ಜಿಲ್ಲೆಯ ಶ್ರೀರಾಮಪುರ ತಾಲ್ಲೂಕಿನ ಸೈನಿಕ್ ನಗರದ ಶಾರುಖ್ ಬಂದೆನವಾಜ್ ಶೇಖ್ (24) ಬಂಧಿತ ಆರೋಪಿಗಳು.
ಈ ನಾಲ್ವರು ದರೋಡೆಕೋರರು ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು, ವೃದ್ಧರು ರಸ್ತೆ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ನಾವು ಪೋಲಿಸರು ಎಂದು ಪರಿಚಯ ಮಾಡಿಕೊಳ್ಳುತ್ತಿದ್ದರು. ಬಳಿಕ ಮುಂದೆ ಗಲಾಟೆ ನಡೆಯುತ್ತಿದ್ದು, ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ, ಅವರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಬ್ಯಾಗಿನಲ್ಲಿ ಹಾಕಿಕೊಡುವುದಾಗಿ ನಂಬಿಸಿ, ಅವರಿಗೆ ಅರಿವಿಗೆ ಬಾರದಂತೆ ಚಿನ್ನಾಭರಣಗಳನ್ನು ದೋಚುತ್ತಿದ್ದರು.
ಇವರನ್ನು ತನಿಖೆ ನಡೆಸಿದಾಗ ಉಡುಪಿ ನಗರ ಹಾಗೂ ಕುಂದಾಪುರದಲ್ಲಿ ತಲಾ ಒಂದು ಪ್ರಕರಣ, ವಿಜಯಪುರದಲ್ಲಿ ನಾಲ್ಕು ಪ್ರಕರಣ, ಚಿಕ್ಕಮಗಳೂರು, ಬಂಟ್ವಾಳ, ಮಂಗಳೂರು ಉರ್ವಾ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿವೆ. ಹಾಗೆ ಇನ್ನೂ ಹಲಾವರು ಕಡೆಗಳಲ್ಲಿ ಇಂತಹದ್ದೇ ಕೃತ್ಯವನ್ನು ಇವರು ನಡೆಸಿದ್ದಾರೆ.
ಆರೋಪಿಗಳಿಂದ ಮಂಗಳೂರಿನಲ್ಲಿ ನಡೆಸಿದ ಕೃತ್ಯದ 12 ಗ್ರಾಂ ತೂಕದ ಚಿನ್ನದ ಚೈನ್, ಕೃತ್ಯಕ್ಕೆ ಬಳಸಿದ ಕಾರು, ಶೈನ್ ಬೈಕ್ ಹಾಗೂ ₹ 5100 ನಗದು ವಶ ಪಡಿಸಿಕೊಳ್ಳಲಾಗಿದೆ. ಹಾಗೆ ಇವರು ಚಿನ್ನಾಭರಣಗಳನ್ನು ದೋಚಿ ಮಾರಾಟ ಮಾಡಿದ್ದ ಮಹಾರಾಷ್ಟ್ರದ ಶ್ರೀರಾಮಪುರ ಎಂಬಲ್ಲಿನ ಚಿನ್ನದ ಅಂಗಡಿಯಲ್ಲಿ ಸುಮಾರು ಏಳು ಲಕ್ಷ ಮೌಲ್ಯದ 65 ಗ್ರಾಂ ಚಿನ್ನವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.