ಮಾಜಿ IPS​ ಅಧಿಕಾರಿ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಲಖನೌದಲ್ಲಿ ಮಾಜಿ ಐಪಿಎಸ್​ ಅಧಿಕಾರಿಯೊಬ್ಬರು ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಮಾಜಿ ಐಪಿಎಸ್​ ಅಧಿಕಾರಿಯೊಬ್ಬರು ತಮ್ಮ ಲೈಸನ್ಸ್ ಹೊಂದಿದ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯ ರಾಜಧಾನಿ ಲಖನೌದಲ್ಲಿ ನಡೆದಿದೆ.

“ನನ್ನ ಈ ಸಾವಿಗೆ ನಾನೇ ಹೊಣೆ” ಎಂದು ಮಾಜಿ ಅಧಿಕಾರಿ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್​ನೋಟ್ ಸ್ಥಳದಲ್ಲಿ ದೊರೆತಿದೆ.

ದಿನೇಶ್ ಕುಮಾರ್ ಶರ್ಮಾ (73) ಆತ್ಮಹತ್ಯೆಗೆ ಶರಣಾದ ಅಧಿಕಾರಿ. ಇಲ್ಲಿನ ಗೋಮತಿ ನಗರ ಪ್ರದೇಶದ ತಮ್ಮ ನಿವಾಸದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇವರು ವಾಸವಿದ್ದರು. ಇಂದು ಬೆಳಗ್ಗೆ ಮನೆಯ ಕೊಠಡಿಯಲ್ಲಿ ಕುರ್ಚಿಯಲ್ಲಿ ಕುಳಿತು ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಪರವಾನಗಿ ಹೊಂದಿದ ರಿವಾಲ್ವರ್ ಹಾಗೂ ಡೆತ್​ನೋಟ್ ದೊರೆತಿದೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ದೊರೆತ ಡೆತ್‌ನೋಟ್
ಸ್ಥಳದಲ್ಲಿ ದೊರೆತ ಡೆತ್​ನೋಟ್​ನಲ್ಲಿ, ”ಆತಂಕ ಮತ್ತು ಖಿನ್ನತೆ ಸಹಿಸಲಾಗದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ನನ್ನ ಶಕ್ತಿ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇನೆ. ಇದಕ್ಕೆ ಬೇರೆ ಯಾರೂ ಕಾರಣರಲ್ಲ” ಎಂಬ ಉಲ್ಲೇಖವಿದೆ. ಕುಟುಂಬ ಸದಸ್ಯರ ವಿಚಾರಣೆ ವೇಳೆ ದಿನೇಶ್ ಶರ್ಮಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿರುವುದಾಗಿ ಭದ್ರತಾ ವಿಭಾಗದ ಡಿಜಿ ವಿನೋದ್ ಕುಮಾರ್ ಸಿಂಗ್ ಹೇಳಿದ್ದಾರೆ.
ದಿನೇಶ್ ಕುಮಾರ್ ಶರ್ಮಾ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಕೊಠಡಿಯನ್ನು ಸೀಲ್ ಮಾಡಲಾಗಿದೆ. ರಿವಾಲ್ವರ್ ಹಾಗೂ ಡೆತ್​ನೋಟ್ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಎಸಿಪಿ ಶ್ವೇತಾ ಚೌಧರಿ ತಿಳಿಸಿದ್ದಾರೆ.
1975ರ ಬ್ಯಾಚ್‌ ಐಪಿಎಸ್ ಅಧಿಕಾರಿಯಾಗಿದ್ದ ಶರ್ಮಾ ಡಿಜಿ ಹುದ್ದೆಗೇರಿ ನಿವೃತ್ತರಾಗಿದ್ದರು. 2010ರಲ್ಲಿ ಉತ್ತರ ಪ್ರದೇಶದ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ಡಿಜಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಿವೃತ್ತಿ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಗೊತ್ತಾಗಿದೆ. ಉತ್ತಮ ಅಧಿಕಾರಿಯಾಗಿದ್ದರು. ಉತ್ತಮ ಕ್ರಿಕೆಟ್ ಆಟಗಾರರೂ ಆಗಿದ್ದು ಐಪಿಎಸ್ ಕ್ರಿಕೆಟ್ ತಂಡದ ಭಾಗವಾಗಿದ್ದರು ಡಿಜಿ ಸಿಂಗ್ ಮಾಹಿತಿ ನೀಡಿದರು.