ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೀವನಾಧಾರಿತ ಕನ್ನಡ ಚಲನಚಿತ್ರವು ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಏಪ್ರಿಲ್-ಮೇ 2023 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ.
ಮಾಜಿ ಶಾಸಕ ಶಿವರಾಜ್ ತಂಗಡಗಿ ಮತ್ತು ಶಾಸಕ ಬಿ ಜೆಡ್ ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಅವರ ವೈಯಕ್ತಿಕ ಮತ್ತು ರಾಜಕೀಯ ಪ್ರಯಾಣವನ್ನು ಬಿಂಬಿಸುವ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ‘ಹೌದು ಹುಲಿಯಾ’ ಎಂಬ ಹೆಸರನ್ನು ಚಿತ್ರತಂಡವು ಯೋಚಿಸುತ್ತಿದ್ದು, ತಮಿಳು ಜನಪ್ರಿಯ ನಟ ವಿಜಯ್ ಸೇತುಪತಿ ಬಳಿ ಸಿದ್ದರಾಮಯ್ಯ ಪಾತ್ರವನ್ನು ನಿಭಾಯಿಸಲು ಕೇಳಿಕೊಳ್ಳಲಾಗುತ್ತದೆ. ನಿರ್ದೇಶಕ ಸತ್ಯ ರತ್ನಂ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತಂದಲ್ಲಿ ಜನರಿಗೆ ಸಿದ್ದರಾಮಯ್ಯನವರ ಬಗ್ಗೆ ತಿಳಿಸಲು ಚಿತ್ರ ಸಹಕಾರಿಯಾಗಲಿದ್ ಎಂದು ಅವರ ಬೆಂಬಲಿಗರು ನಂಬಿದ್ದಾರೆ. ಚಿತ್ರ ನಿರ್ಮಾಪಕರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ ಎಸ್ ಶಿವಣ್ಣ ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.