ಕಾಡು ಬೆಳೆಸುವುದು ನಮ್ಮ ಸಂಸ್ಕೃತಿ: ಉದಯ ಕುಮಾರ್ ಶೆಟ್ಟಿ

ಉಡುಪಿ: ಪ್ರತಿಯೊಂದು ಮರವನ್ನು ಕೂಡ ನೂರಾರು ಸಂಖ್ಯೆಯ ಜೀವಿಗಳು ಅವಲಂಬಿಸಿಕೊಂಡಿರುತ್ತದೆ. ಮರಗಳನ್ನು, ಕಾಡನ್ನು ಬೆಳೆಸುವುದು ನಮ್ಮ ಸಂಸ್ಕೃತಿ.  ಅದು‌ ಪಾಶ್ಚಿಮಾತ್ಯರಿಂದ ಆಮದು‌ ಮಾಡಿಕೊಂಡಿರುವ ಗಾರ್ಡನ್‌ ವ್ಯವಸ್ಥೆ ಅಲ್ಲ  ಎಂದು ಪಿಲಿಕುಲ ಔಷಧಿ ವನದ ಮೇಲ್ವಿಚಾರಕ ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾದ ಒಂದು ಸಾವಿರ ಸಸಿಗಳನ್ನು ನೆಟ್ಟು ಮತ್ತು ಮುಂದಿನ ಐದು ವರ್ಷಗಳ ಕಾಲ ಅವುಗಳನ್ನು ಪೋಷಿಸುವ ಯೋಜನೆ ‘ಕಾಡು ಬೆಳೆಸಿ ನಾಡು ಉಳಿಸಿ’ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವು ಗಿಡಗಳನ್ನು ನೆಡುವಾಗ ಪ್ರಾದೇಶಿಕ ಮರಗಳಿಗೆ ಆದ್ಯತೆ ನೀಡಬೇಕು. ಒಂದೇ ಜಾತಿಯ ಗಿಡಗಳನ್ನು ನೆಡುವ ಬದಲು ಬಹುಜಾತಿಯ ಗಿಡಗಳನ್ನು ನೆಡಬೇಕು. ಇದರಿಂದ ಪರಿಸರ ಸಮಾತೋಲನವನ್ನು ಕಾಪಾಡಬಹುದಾಗಿದೆ. ಒಂದು ಮರವನ್ನು ನಾಶ ಮಾಡಿದರೆ ಅದರ ಜತೆ ಅವಲಂಬಿತ ಕೀಟ, ಪಕ್ಷಿ, ಪ್ರಾಣಿಗಳ ನಾಶವಾಗುತ್ತದೆ. ಆದ್ದರಿಂದ ಈ ಭೂಮಿ ಮೇಲೆ ಇರುವ ಪ್ರತಿಯೊಂದು ಮರ ಕೂಡ ಅತ್ಯಂತ ಅಗತ್ಯವಾದುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ‌ ಪರಿಸರ ಪ್ರಜ್ಞೆಯನ್ನು ಬೆಳೆಸಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರದೀಪ್‌ ಕುಮಾರ್‌ ಮಾತನಾಡಿ, ಮರಗಿಡಗಳು ಮಾನವಕುಲದ ಏಳಿಗೆಗೆ ಸೃಷ್ಟಿಯಾದ ಪ್ರಕೃತಿ ಸಂಪತ್ತು  ಎಂದರು.

ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್‌ ಲೋಬೊ ಮಾತನಾಡಿ, ಮಳೆ ನೀರನ್ನು ಶೇಖರಿಸಿಡುವ ಏಕೈಕ ಉಗ್ರಾಣ ಅಂದರೆ ಅದು ಅರಣ್ಯ ಮಾತ್ರ. ಶೇ. 30ರಷ್ಟು ಪ್ರಮಾಣದಷ್ಟು ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಅರಣ್ಯಕ್ಕಿದೆ. ಪ್ರಕೃತಿ ಸಮತೋಲನಕ್ಕೆ ಅರಣ್ಯ‌ ಎಷ್ಟು ಮುಖ್ಯವೋ, ವನ್ಯಜೀವಿಗಳು ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ಎ. ರಘುವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್‌ ಯೋಜನಾಧಿಕಾರಿ ಚೈತ್ರಾ ಉಪಸ್ಥಿತರಿದ್ದರು. ಎನ್‌ಎಸ್‌ಎಸ್‌ ಯೋಜನಾಧಿಕಾರಿ ವಿಶಾಖ್‌ ಪ್ರಾಸ್ತಾವನೆಗೈದರು. ವಿದ್ಯಾರ್ಥಿ ಅಶ್ವಥ್‌ ಸ್ವಾಗತಿಸಿದರು.