ಕುಂದಾಪುರ: ಕುಂದಾಪುರ ಅರಣ್ಯ ಇಲಾಖೆಯ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರೊಬ್ಬರ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಕುಂದಾಪುರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಚಾಲಕ ಕುಂದಾಪುರದ ಕುಂದೇಶ್ವರದ ನಿವಾಸಿ ಅಶೋಕ್ (38) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬುಧವಾರ ಸಂಜೆ ವೇಳೆಗೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದೊಳಕ್ಕೆ ನುಗ್ಗಿದ ಆರೋಪಿಗಳಾದ ಇಮ್ತಿಯಾಝ್, ವಿನೋದ್ ಹಾಗೂ ಮತ್ತಿಬ್ಬರು ಅಶೋಕ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆನ್ನಲಾಗಿದೆ. ಅಕ್ರಮ ಮರ ಸಾಗಾಟದ ವಾಹನವೊಂದನ್ನು ಅರಣ್ಯ ಇಲಾಖಾಧಿಕಾರಿ ಗಳು ವಶಕ್ಕೆ ಪಡೆದು ಬುಧವಾರದಂದು ಪ್ರಕರಣ ದಾಖಲಿಸಿದ್ದರು. ಮರ ಸಾಗಾಟದ ಮಾಹಿತಿ ಯನ್ನು ಚಾಲಕ ಅಶೋಕ್ ಇಲಾಖೆಗೆ ನೀಡಿರಬಹುದೆಂದು ಭಾವಿಸಿದ್ದ ಆರೋಪಿಗಳು ಈ ಹಲ್ಲೆ ನಡಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಗಾಯಾಳು ಅಶೋಕ್ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿಗಳಾದ ಬಿ. ಉದಯ್, ಗುರುರಾಜ್, ಶರತ್, ದಿಲೀಪ್, ಸುನೀಲ್, ಪ್ರಥಮ ದರ್ಜೆ ಸಹಾಯಕ ಸತೀಶ್, ಕಚೇರಿ ಸಿಬ್ಬಂದಿ ಅಣ್ಣಪ್ಪ, ಗಸ್ತು ಅರಣ್ಯ ಪಾಲಕರಾದ ಆನಂದ ಬಳೆಗಾರ, ಉದಯ್ ಕುಮಾರ್, ಬಸವರಾಜ್, ರಾಮಪ್ಪ, ಅರಣ್ಯ ವೀಕ್ಷಕ ಸೋಮಶೇಖರ್, ಚಾಲಕ ಸತೀಶ್ ಕುಲಾಲ್ ಭೇಟಿ ನೀಡಿದ್ದಾರೆ.