ಬಿಸಿಬಿಸಿ ಪಲಾವ್, ಬೊಂಬಾಟ್ ಕೇಸರಿಬಾತ್: ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಆಹಾರ ಮೇಳ ಭಾರೀ ಗಮ್ಮತ್ತ್

ಕುಂದಾಪುರ: ಬಿಸಿಬಿಸಿ ಪಲಾವ್ ಇದೆ..ಕೇಸರಿ ಬಾತ್ ಕೂಡ ರೆಡಿ ಇದೆ..ಬನ್ನಿ ಸರ್..ಬನ್ನಿ ಮೇಡಂ!  ಇಲ್ಲಿ ಬನ್ನಿ.. ಇಲ್ಲಿ ಬನ್ನಿ.. ಬರೇ ಹತ್ತು ರೂಪಾಯಿ…ಶುಚಿರುಚಿಯಾದ ರಾಗಿ ಜ್ಯೂಸ್..ಬನ್ನಿ ಸರ್..ಬನ್ನಿ ಮೇಡಂ..  ದಣಿವಾರಿಸಿಕೊಳ್ಳಿ ಅಣ್ಣ..ಕಲ್ಲಂಗಡಿ ಹಣ್ಣು ತಿನ್ನಿ..ಲಿಂಬು ಶರಬತ್ ಕುಡಿಯಿರಿ..ಕೇವಲ ಹತ್ತು ರೂಪಾಯಿ ಕೊಟ್ಟು..

ಆಹಾ…ಆಹಾರ ಮೇಳ

ಸೋಮವಾರ ಹೆಮ್ಮಾಡಿ ಪ್ರಾಥಮಿಕ ಶಾಲಾ ಆವರಣ ಒಳ ಪ್ರವೇಶಿಸುತ್ತಿದ್ದಂತೆ ವಿದ್ಯಾರ್ಥಿಗಳ ಬಾಯಿಯಿಂದ ಕೇಳಿಬಂದ ಮಾತುಗಳಿವು! ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ, ವ್ಯಾಪಾರ ಕೌಶಲ್ಯವನ್ನು ಬೆಳೆಸುವ ಸದುದ್ದೇಶದಿಂದ ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಆಹಾರ ಮೇಳ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ದಿನಾಲು ತರಗತಿಕೋಣೆಯಲ್ಲಿ ಕುಳಿತು ಪಾಠ ಪ್ರವಚನಗಳಲ್ಲಿ ತಲ್ಲೀನರಾಗಿರುತ್ತಿದ್ದ ವಿದ್ಯಾರ್ಥಿಗಳು ಸೋಮವಾರ ತಾವೇ ಕೈಯ್ಯಾರೆ ತಯಾರಿಸಿದ ಆಹಾರ ಖಾದ್ಯಗಳನ್ನು ಮಾರಾಟ ಮಾಡಲು ತಲ್ಲೀನರಾಗಿದ್ದರು. ಆಹಾರ ಮೇಳಕ್ಕೆ ಬಂದ ಗ್ರಾಹಕರ ಮನವೊಲಿಸಿ ತಾವು ತಯಾರಿಸಿದ ತಿಂಡಿ- ತಿನಿಸುಗಳನ್ನು ಮರಾಟ ಮಾಡಿ ಹಣ ಪಡೆದುಕೊಂಡು ಮೊಗದಲ್ಲಿ ಮಂದಹಾಸ ಕಂಡುಬಂದಿತು. ಬೆಳಗ್ಗೆ ಬೇಗ ಬಂದು ಶಾಲೆಯಲ್ಲೇ ಶಿಕ್ಷಕರು, ಎಸ್‍ಡಿಎಮ್‍ಸಿ ಸದಸ್ಯರು ಹಾಗೂ ಅಡುಗೆ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಕೇಸರಿಬಾತ್ ಹಾಗೂ ಪಲಾವ್ ಕೆಲವೇ ಗಂಟೆಗಳಲ್ಲಿ ಖಾಲಿಯಾಯಿತು. ಕಲ್ಲಂಗಡಿ ಹಣ್ಣಿನ ಸೇಡು ಹಾಗೂ ಜ್ಯೂಸ್, ರಾಗಿ ಹಾಗೂ ಹೆಸರು ಜ್ಯೂಸ್ ಕೇವಲ ಹತ್ತು ರೂಪಾಯಿಗೆ ಮಾರಾಟವಾದವು.

ಶಾಲೆಯಲ್ಲಿ ಗಮನಸೆಳೆದ ಮಿನಿ ಸಂತೆ!:
ಶಾಲೆಯಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಯೋರ್ವ ನಡೆಸಿದ ದಿನಸಿ ಸಾಮಗ್ರಿಗಳ ಸಂತೆ ವಿಶಿಷ್ಟವಾಗಿ ಕಂಡುಬಂತು. ಸೋಮವಾರ ಹೆಮ್ಮಾಡಿ ಶಾಲಾ ಆಹಾರ ಮೇಳಕ್ಕೆ ಆಗಮಿಸಿದ ಗ್ರಾಹಕರು, ವಿದ್ಯಾರ್ಥಿಗಳ ಪೋಷಕರು ಸಂತೆಯಲ್ಲಿ ಮನೆಗೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಕೊಂಡುಕೊಂಡರು. ಗ್ರಾಹಕರು ಹಾಗೂ ದಿನಸಿ ಅಂಗಡಿಯ ವಿದ್ಯಾರ್ಥಿಯ ನಡುವೆ ರಿಯಾಯಿತಿ ದರಕ್ಕಾಗಿ ಸಾಕಷ್ಟು ಚರ್ಚೆಗಳು ನಡೆದವು. ಮೆಣಸು, ಕುತ್ತುಂಬರಿ, ಹುಳಿ, ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ, ಮೆಂತೆ, ಕಾಳುಮೆಣಸು ಸೇರಿದಂತೆ ಇನ್ನಿತರ ದಿನಸಿ ವಸ್ತುಗಳನ್ನು ಖರೀಸಿದಿಸಲು ಗ್ರಾಹಕರು ಮುಗಿಬಿದ್ದರು.

ಕರಕುಶಲ ವಸ್ತು, ವಿಜ್ಞಾನ ಮಾದರಿ ಪ್ರದರ್ಶನ:
ಶಾಲೆಯಲ್ಲಿ ಆಹಾರ ಮೇಳಕ್ಕೆ ಆಗಮಿಸಿದ ಗ್ರಾಹಕರಿಗೆ, ವಿದ್ಯಾರ್ಥಿಗಳ ಪೋಷಕರಿಗಾಗಿ ಕರಕುಶಲ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ತಯಾರಿಸಿದ ಕರಕುಶಲ ವಸ್ತುಗಳು ನೋಡುಗರನ್ನು ಆಕರ್ಷಿಸಿದವು. ಜೊತೆಗೆ ಶಾಲಾ ಪ್ರಯೋಗಾಲಯದಲ್ಲಿ ಆಯೋಜಿಸಿದ್ದ ವಿಜ್ಞಾನ ಮಾದರಿಗಳನ್ನು ನೋಡಿ ಖುಷಿಪಟ್ಟರು.

ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ, ವ್ಯಾಪಾರ ಕೌಶಲ್ಯವನ್ನು ಬೆಳೆಸುವ ಸದುದ್ದೇಶದಿಂದ ನಮ್ಮ ಶಾಲೆಯಲ್ಲಿ ಆಹಾರ ಮೇಳವನ್ನು ಆಯೋಜಿಸಿದ್ದೇವೆ. ಮಕ್ಕಳು ತಾವೇ ತಯಾರಿಸಿದ ಆಹಾರಪದಾರ್ಥಗಳನ್ನು ಮಾರಾಟ ಮಾಡಿದ್ದಾರೆ. ಸಹಶಿಕ್ಷಕಿಯರು, ಶಾಲಾಭಿವೃದ್ದಿ ಸಮಿತಿ, ಹಳೆ ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಆಹಾರ ಮೇಳಕ್ಕೆ ತುಂಬಾ ಸಹಕಾರ ನೀಡಿದ್ದಾರೆ ಎಂದು  ಹೆಮ್ಮಾಡಿ  ಶಾಲೆಯ  ಮುಖ್ಯೋಪಾಧ್ಯಾಯ ದಿವಾಕರ್ ತಿಳಿಸಿದರು.