ಉಡುಪಿಗೆ ವರುಣಾಘಾತ: ನದಿಪಾತ್ರದ ಪ್ರದೇಶಗಳು ಮುಳುಗಡೆ

ಉಡುಪಿ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆ ಉಡುಪಿ ಜಿಲ್ಲೆಯ ನದಿಪಾತ್ರದ ಪ್ರದೇಶಗಳು, ತಗ್ಗುಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ.

ಸ್ವರ್ಣೆಯ ಆರ್ಭಟ:
ಹಿರಿಯಡಕ, ಪುತ್ತಿಗೆ, ಪೆರಂಪಳ್ಳಿ ಭಾಗದಲ್ಲಿ ಹಾದುಹೋಗುವ ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದ ನದಿಗೆ ತಾಗಿಕೊಂಡಿರುವ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಕೊಳಲಗಿರಿ, ಹಿರಿಯಡಕ, ಬೆಳ್ಳಂಪಳ್ಳಿ, ಹೆರ್ಗ, ಪರೀಕ ಭಾಗದಲ್ಲಿ ಕೃತಕ ನೆರೆ ಉಂಟಾಗಿದೆ.

ಪುತ್ತಿಗೆ ಮಠಕ್ಕೆ ನುಗ್ಗಿದ ನೀರು:
ಹಿರಿಯಡಕ ಸಮೀಪದ ಪುತ್ತಿಗೆ ಮೂಲ ಮಳೆ ನೀರು ನುಗ್ಗಿದೆ. ಮಠದ ಗೋಶಾಲೆಯಲ್ಲಿ ನೀರು ತುಂಬಿದ್ದು, ಜಾನುವಾರಗಳನ್ನು ಸ್ಥಳೀಯರ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.

ಸೀತಾನದಿಯ ರೌದ್ರ ನರ್ತನ:
ಬ್ರಹ್ಮವಾರ ಭಾಗದಲ್ಲಿ ಹರಿಯುವ ಸೀತಾನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದ ನೀಲಾವರ, ಉಪ್ಪೂರು ಮೊದಲಾದ ಪ್ರದೇಶಗಳಲ್ಲಿ ನೆರೆ ಉಂಟಾಗಿದೆ. ಉಪ್ಪೂರಿನ ಸರ್ಕಾರಿ ಶಾಲೆ ಸಹಿತ ಹಲವಾರು ಮನೆಗಳು ಮುಳುಗಡೆಯಾಗಿವೆ ಎಂದು ವರದಿಯಾಗಿದೆ.

ಮಟ್ಟು, ಪಡುಕರೆ ಮುಳುಗಡೆ:
ಉದ್ಯಾವರ ಭಾಗದಲ್ಲಿ ಪಾಪನಶಿನಿ ನದಿ ಅಪಾಯದ ಮಟ್ಟವನ್ನು ಹರಿಯುತ್ತಿದ್ದು, ಇದರಿಂದ ಕಟಪಾಡಿಯ ಮಟ್ಟು, ಕೈಪುಂಜಾಲು, ಪಡುಕರೆ, ಕಡೆಕಾರು ಪ್ರದೇಶಗಳು ಜಲಾವೃತಗೊಂಡಿದೆ. ಅಪಾಯದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗುತ್ತಿದೆ.

ಕಾಪು, ಕುರ್ಕಾಲು, ಕಲ್ಮಂಜೆ, ಮೂಡುಅಲೆವೂರು ಮೊದಲಾದ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.

ಎನ್ ಡಿಆರ್ ಎಫ್ ತಂಡದಿಂದ ಕಾರ್ಯಾಚರಣೆ:
ಮಂಗಳೂರಿನಿಂದ ಉಡುಪಿಗೆ ಎನ್ ಡಿಆರ್ ಎಫ್ ತಂಡ ಆಗಮಿಸಿದ್ದು, ಬೈರಂಪಳ್ಳಿಯಲ್ಲಿ ಸ್ವರ್ಣ ನದಿ ಪಾತ್ರದಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕೊಡವೂರು, ಬೈಲಕೆರೆ ಮೊದಲಾದ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.